ಇಂದಿನಿಂದ ಜಿಲ್ಲೆಯಾದ್ಯಂತ ಸಹಕಾರಿ ತತ್ವದ ಕಲರವ

| Published : Nov 14 2024, 12:46 AM IST

ಇಂದಿನಿಂದ ಜಿಲ್ಲೆಯಾದ್ಯಂತ ಸಹಕಾರಿ ತತ್ವದ ಕಲರವ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ: ನವೆಂಬರ್ 14 ರಿಂದ 20 ವರೆಗೆ ದೇಶದಾದ್ಯಂತ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದ್ದು, ಚಿತ್ರದುರ್ಗ ಜಿಲ್ಲೆಯ ಏಳು ಸ್ಥಳಗಳಲ್ಲಿ, ಏಳು ದಿನ ಸಹಕಾರಿ ತತ್ವದ ವಿವಿಧ ಅಂಶಗಳ ಆಧಾರದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ ಕೋಗುಂಡೆ ತಿಳಿಸಿದರು.

ಚಿತ್ರದುರ್ಗ: ನವೆಂಬರ್ 14 ರಿಂದ 20 ವರೆಗೆ ದೇಶದಾದ್ಯಂತ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದ್ದು, ಚಿತ್ರದುರ್ಗ ಜಿಲ್ಲೆಯ ಏಳು ಸ್ಥಳಗಳಲ್ಲಿ, ಏಳು ದಿನ ಸಹಕಾರಿ ತತ್ವದ ವಿವಿಧ ಅಂಶಗಳ ಆಧಾರದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ ಕೋಗುಂಡೆ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎನ್ನುವ ಧ್ಯೇಯ ವಾಕ್ಯದೊಂದಿಗೆ ಈ ಬಾರಿಯ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ನ.14ರ ಗುರುವಾರ ರಂದು ಬೆಳಿಗ್ಗೆ 10 ಗಂಟೆಗೆ ಚಿತ್ರದುರ್ಗ ನಗರದ ಕೆಳಗೋಟೆಯ, ಬಿ.ಎಲ್.ಗೌಡ ಲೇಔಟ್ ಅಲ್ಲಿರುವ ಸಹಕಾರ ಭವನದ ಆವರಣದಲ್ಲಿ ಸಹಕಾರ ಧ್ವಜಾರೋಹಣ ನೆರವೇರಿಸುವುದರ ಮೂಲಕ ಸಪ್ತಾಹ ಆಚರಣೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ನ.15 ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ನಗರದ ''''''''ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ ಎನ್ನುವ ತತ್ವದೊಂದಿಗೆ ದಿನಾಚರಣೆಯನ್ನು ಆಚರಿಸಲಾಗುವುದು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಮಾರಂಭದ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಹಕಾರ ಧ್ವಜಾರೋಹಣ ನೆರವೇರಿಸುವರು. ಕಲ್ಯಾಣ ಮಂಟಪದ ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಸಂಸದ ಗೋವಿಂದ ಎಂ.ಕಾರಜೋಳ ವಸ್ತು ಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಪ್ರಕಟಿಸುವ ಸಹಕಾರ ವಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೆಗೌಡ ಬಿಡುಗಡೆ ಮಾಡುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಚಿದಾನಂದ್ ಎಂ.ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ವೆಂಟರಾವ್ ನಾಡಗೌಡ ಭಾಗವಹಿಸುವರು. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ 6 ಹಿರಿಯ ಸಹಕಾರಿಗಳಿಗೆ ಹಾಗೂ 6 ಸಹಕಾರಿ ಸಂಘಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಅಖಿಲ ಭಾರತ ಸಪ್ತಾಹದ ಅಂಗವಾಗಿ ನ.14 ರಂದು ಹೊಳಲ್ಕೆರೆ ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ, ನ.16 ರಂದು ಹೊಸದುರ್ಗ ಪಟ್ಟಣದ ಜಯದೇವ ಕಲ್ಯಾಣ ಮಂಟಪ, ನ.17 ರಂದು ಚಳ್ಳಕೆರೆ ಕಂಬಳಿ ಮಾರುಕಟ್ಟೆ ಭವನ, ನ.18 ಮೊಳಕಾಲ್ಮೂರು ತಾಲೂಕಿನ ರಾಂಪುರ ಪಿಎಸಿಎಸ್ ಆವರಣ, ನ.19 ರಂದು ಹಿರಿಯೂರು ತಾಲೂಕಿನ ಆರನಕಟ್ಟೆ ಪಿಎಸಿಎಸ್ ಆವರಣ ಹಾಗೂ ನ.20 ರಂದು ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಪಿಎಸಿಎಸ್ ಮತ್ತು ಎಂಪಿಸಿಎಸ್ ಆವರಣದಲ್ಲಿ ಸಪ್ತಾಹ ಆಚರಣೆ ಮಾಡಲಾಗುವುದು ಎಂದರು.

ರಾಜ್ಯ ಮಂಡಳಿಯ ನಿರ್ದೇಶಕ ರಾಮರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚಿನ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 1.5 ಲಕ್ಷ ಜನರಿಗೆ ಸಹಕಾರಿ ಸಂಘಗಳ ಮೂಲಕ ಉದ್ಯೋಗ ದೊರಕಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದಿಂದ ರಾಜ್ಯಾದ್ಯಂತ 8 ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಪಿಯುಸಿ ಪೂರೈಸಿದ ವಿದ್ಯಾರ್ಥಿಗಳಿಗೆ ಸಹಕಾರಿ ಕ್ಷೇತ್ರದ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇಷ್ಟು ದೊಡ್ಡ ವ್ಯಾಪ್ತಿಯಲ್ಲಿ ಪಸರಿಸಿ, ರಾಜ್ಯದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಹಕಾರಿ ಸಂಘಗಳ ಕುರಿತು ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಪಠ್ಯದ ಮೂಲಕ ತಿಳಿಸಿಕೊಡುವ ಕಾರ್ಯ ಮಾಡಬೇಕು. ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿ ಸಹಕಾರಿ ವಿಷಯವನ್ನು ಪಠ್ಯವಾಗಿಸಬೇಕು. ಸಮಾಜದಲ್ಲಿ ಡಾಕ್ಟರ್, ಎಂಜಿಯರ್‌ಗಳಂತೆ ಸಹಕಾರಿ ವಿಷಯದ ಪರಿಣಿತರ ಅವಶ್ಯಕತೆ ಇದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ಇಲ್ಯಾಸ್ ಉಲ್ಲಾ ಷರೀಫ್, ಸಹಕಾರಿ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಾಹುಬಲಿ ಹಂಜೆ ಉಪಸ್ಥಿತರಿದ್ದರು.