ಸಾರಾಂಶ
ಗದಗ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಐದು ಶತಮಾನಗಳ ಕಾಲದ ವಿವಾದ ಪರಿಹಾರವಾಗಿದೆ. ಇದರೊಟ್ಟಿಗೆ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿ ಪ್ರಧಾನಿ ನರೇಂದ್ರ ಮೋದಿಯಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಪ್ರಸಿದ್ಧಿ ಪಡೆದಿದ್ದಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡ, ಕಾಂಗ್ರೆಸ್ ನಾಯಕ ರಾಮಣ್ಣ ಫಲದೊಡ್ಡಿ ಹೇಳಿದರು. ಅವರು ಸೋಮವಾರ ಗದಗ ನಗರದ ಜೋಡ ಮಾರುತಿ ದೇವಾಲಯದ ಮುಂದೆ ಶ್ರೀರಾಮ ಸೇನೆಯ ಆಶ್ರಯದಲ್ಲಿ ಬೃಹತ್ ಶ್ರೀರಾಮ ಹಾಗೂ ವಾಲ್ಮೀಕಿ ಮೂರ್ತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಿದ್ದರಿಂದ ಮಹರ್ಷಿ ವಾಲ್ಮೀಕಿ ಹೆಸರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಇದರಿಂದಾಗಿ ಭಾರತ ದೇಶವಾಸಿಗಳಿಗಷ್ಟೇ ಇದುವರೆಗೆ ಪರಿಚಯವಿದ್ದ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸುವಂತಾಗಿದೆ. ಈ ಕಾರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮಸ್ತ ವಾಲ್ಮೀಕಿ ಸಮಾಜದಿಂದ ಅಭಿನಂದಿಸುವುದಾಗಿ ಹೇಳಿದರು.ಬಿಜೆಪಿಯ ಹಿರಿಯ ಧುರೀಣ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ವಿಠ್ಠಲ ಖಟವಟೆ ಮಾತನಾಡಿ ಅಯೋಧ್ಯೆಯಲ್ಲಿ 1991 ರಲ್ಲಿ ಜರುಗಿದ ಕರಸೇವೆಯಲ್ಲಿ ಪಾಲ್ಗೊಂಡ ಅನುಭವಗಳನ್ನು ನೆನಪಿಸಿಕೊಂಡರು. ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ ಮಾತನಾಡಿ, ದೇಶದಲ್ಲಿ ಹಿಂದೂ ಉಳಿದರೇ ಮಾತ್ರ ಹಿಂದೂ ಸಮಾಜ ಉಳಿಯಲಿದೆ ಎಂದರು. ಇಡೀ ದೇಶ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗಳ ಪ್ರತಿಷ್ಠಾಪನೆ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರಕಾರ ತನ್ನ ಕಚೇರಿಗಳಿಗೆ ಅರ್ಧ ದಿನ ರಜೆ ನೀಡಿದೆ. ಕೇಂದ್ರ ಸರಕಾರಿ ಸ್ವಾಮ್ಯ ಶಾಲೆ,ಕಾಲೇಜುಗಳಿಗೆ ರಜೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ರಾಜ್ಯದಲ್ಲಿ ಸರಕಾರಿ ರಜೆ ಘೋಷಿಸದೇ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದ್ದಾರೆ. ಮುಂದೊಂದು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಈ ಕೃತ್ಯಕ್ಕೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಧ್ಯಕ್ಷ ಫಕೀರಸಾ ಭಾಂಡಗೆ, ಬಿಜೆಪಿ ಧುರೀಣ ಪ್ರಶಾಂತ ನಾಯ್ಕರ, ಬಸವರಾಜ ಕುರುಗೋಡ, ನಗರಸಭಾ ಸದಸ್ಯ ಮಹಾಂತೇಶ ನಲವಡಿ, ನಾಗರಾಜ ತಳವಾರ, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಸೋಮು ಗುಡಿ, ಬಸವರಾಜ ಕುರ್ತಕೋಟಿ, ಅಪ್ಪು ಧುಂಡಸಿ, ರವಿ ಮುಕ್ಕಣ್ಣವರ, ಹುಲಿಗೆಪ್ಪ ವಾಲ್ಮೀಕಿ, ಸತೀಶ ಕುಂಬಾರ, ಕಿರಣ ಹಿರೇಮಠ, ಮಲ್ಲು ಚಿಂಚಲಿ, ರಾಜೂ ಮುಧೋಳ, ವೆಂಕಟೇಶ ದೊಡ್ಡಮನಿ, ರವಿ ಕರಬಸಣ್ಣವರ, ಸುನೀಲ ಮುಳ್ಳಾಳ, ಶಿವಯೋಗಿ ಹಿರೇಮಠ, ಮೌನೇಶ ಚನ್ನದಾಸರ, ಮಹಾಬಳೇಶ ಶೆಟ್ಟರ ಮುಂತಾದವರು ಹಾಜರಿದ್ದರು. ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಂಗವಾಗಿ ಸೋಮವಾರ ಶೋಭಾಯಾತ್ರೆ ನಡೆಸಲು ಅನುಮತಿ ಕೊಡಿಸುವಂತೆ ಶ್ರೀರಾಮ ಸೇನಾ ಕಾರ್ಯಕರ್ತರು ಕಾನೂನು ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರೂ ಸಹ ಶೋಭಾಯಾತ್ರೆಗೆ ಅನುಮತಿ ಕೊಡಿಸದೇ ಸಚಿವ ಎಚ್.ಕೆ.ಪಾಟೀಲ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದ್ದಾರೆ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.