ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕವಾಗಿ ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಕೆ ಖಂಡಿಸಿ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದವರು ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಆರ್.ಟಿ.ಒ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.ಹೊರ ರಾಜ್ಯದಲ್ಲಿ ನೋಂದಣಿ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ, ರಾಜ್ಯ ಬಸ್ ಮಾಲೀಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು. ಸರ್ಕಾರ ನಿಗದಿಪಡಿಸಿರುವ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಹಣವನ್ನು ಸರ್ಕಾರವೇ ಭರಿಸಬೇಕು. ಪ್ರವಾಸಿ ವಾಹನಗಳ ತೆರಿಗೆ ಶೇ.30 ರಷ್ಟು ಕಡಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ವೈಟ್ ಬೋರ್ಡ್ ನಲ್ಲಿ ಪ್ರವಾಸ ಹೋಗುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವೈಟ್ ಬೋರ್ಡ್ ಸೆಲ್ಫ್ ಡ್ರೈವ್ ವಾಹನಗಳು, ಆಪ್ ಮೂಲಕ ಅಂತರ ರಾಜ್ಯ ತೆರಿಗೆ ಕಳ್ಳರಿಗೆ ಕಠಿಣ ಶಿಕ್ಷೆ ನೀಡಬೇಕು. ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ದಂಡ ತೆಗೆಯಬೇಕು. ನಮ್ಮ ಪ್ರವಾಸಿ ವಾಹನಗಳು ಪಾವತಿಸಿರುವ ಶೇ.10 ರಷ್ಟು ತೆರಿಗೆಯನ್ನು ನಮಗೆ ಹಿಂದಿರುಗಿಸಬೇಕು ಎಂದು ಅವರು ಒತ್ತಾಯಿಸಿದರು.ಹೊರ ರಾಜ್ಯದಿಂದ ನೋಂದಣಿ ಮಾಡಿಸಿ ರಾಜ್ಯದಲ್ಲಿ ಚಾಲನೆಯಲ್ಲಿರುವ ವಾಹನಗಳನ್ನು ಆರ್.ಟಿ.ಒ ಕೂಡಲೇ ವಶಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ 250 ಬಸ್ ಗಳನ್ನು ಆರ್.ಟಿ.ಒ ಕಚೇರಿ ಮುಂದೆ ನಿಲ್ಲಿಸಿ ವಾಹನದ ದಾಖಲೆ, ಕೀಯನ್ನು ಆಯುಕ್ತರಿಗೆ ನೀಡುತ್ತೇವೆ ಎಂದು ಅವರು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸಿ. ರವಿ, ಪ್ರಧಾನ ಕಾರ್ಯದರ್ಶಿ ಕೌಶಿಕ್, ಜಿಲ್ಲಾ ರಕ್ಷಾಧಿಕಾರಿ ಅರುಣ್ ಕುಮಾರ್ ಮೊದಲಾದವರು ಇದ್ದರು.----
ಬಾಕ್ಸ್...ಲೋಪ ಸರಿಪಡಿಸದಿದ್ದರೇ ಹೋರಾಟ- ಪ್ರತಾಪ್ ಸಿಂಹ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು. ಬಳಿಕ ಆರ್.ಟಿ.ಒ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ನಂತರ ಮಾತನಾಡಿದ ಅವರು, ಖಾಸಗಿ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಬೇಕು. ಪ್ಯಾನಿಕ್ ಬಟನ್ ಅವಳಡಿಕೆ ಮಾಡಬೇಕೆಂಬುದು ಉತ್ತಮ ನಿರ್ಧಾರ. ಇದನ್ನು ಜಾರಿಗೆ ತಂದಿದ್ದೇ ಕೇಂದ್ರ ಸರ್ಕಾರ. ಹೊರಗಡೆ ಜಿಪಿಎಸ್ ಅಳವಡಿಕೆ ಮಾಡಿಸಿಕೊಳ್ಳಲು 1- 2 ಸಾವಿರ ಖರ್ಚಾಗುತ್ತದೆ. ಆದರೆ, ಈ ಜಿಪಿಎಸ್ ಅವಳಡಿಕೆಗೆ 12 ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಜಿಪಿಎಸ್ ಅವಳಡಿಕೆ ಕಂಪನಿಯವರು ಯದ್ವಾ ತದ್ವಾ ರೇಟ್ ಫಿಕ್ಸ್ ಮಾಡ್ತಿದ್ದಾರೆ. ಕೂಡಲೇ ಈ ಲೋಪವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ನಾವೇ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಹಾಗೂ ವಾಹನಗಳಿಗೆ ಜನ ಬರುತ್ತಿಲ್ಲ. ಖಾಸಗಿ ವಾಹನ ಚಾಲಕರು ಮಾಲೀಕರು ಸಂಕಷ್ಟದಲ್ಲಿದ್ದಾರೆ. ನಿಮ್ಮ ಶಕ್ತಿ ಯೋಜನೆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.