ರಾಜ್ಯ ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ

| Published : Jun 28 2024, 02:15 AM IST / Updated: Jun 28 2024, 12:22 PM IST

ಸಾರಾಂಶ

ರಾಜ್ಯ ಒಕ್ಕಲಿಗರ ಸಂಘದಿಂದ ಕಂಠೀರವ ಕ್ರೀಡಾಂಗಣದಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಯಿತು.

 ಬೆಂಗಳೂರು : ನಾಡಪ್ರಭು ಕೆಂಪೇಗೌಡ ಅವರ 515ನೇ ಜಯಂತಿ ಅಂಗವಾಗಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಸೇರಿದಂತೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಕಲಾತಂಡಗಳೊಂದಿಗೆ ರಥದಲ್ಲಿ ಕೆಂಪೇಗೌಡರ ಭಾವಚಿತ್ರವಿರಿಸಿ ಒಕ್ಕಲಿಗರ ಸಂಘದ ಆವರಣದಿಂದ ಕಂಠೀರವ ಕ್ರೀಡಾಂಗಣದವರೆಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಂಘದ ಅಧೀನ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಮುದಾಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು. ಅಶ್ವಾರೂಢ ಕೆಂಪೇಗೌಡ ವೇಷಧಾರಿ, ನಂದಿಧ್ವಜ, ವೀರಭದ್ರ ಕುಣಿತ, ಗಾರುಡಿ ಗೊಂಬೆ, ಡೊಳ್ಳು ಕುಣಿತ, ತಮಟೆ, ಪಾಳೆಗಾರ ವೇಷ, ಪೂಜಾ ಕುಣಿತ, ಪಟ ಕುಣಿತ, ಮೈಸೂರು ನಗಾರಿ ಕಲಾತಂಡಗಳು ಮೆರವಣಿಗೆ ವೇಳೆ ಪ್ರದರ್ಶನ ನೀಡಿದವು.

ಮೆರವಣಿಗೆಗೂ ಮುನ್ನ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ। ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಕಿಮ್ಸ್‌ ಆಸ್ಪತ್ರೆ ಬಳಿಯ ಅಶ್ವಾರೂಢ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ವೇಳೆ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಎಚ್‌.ಸಿ.ಜಯಮುತ್ತು, ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡ, ಉಪಾಧ್ಯಕ್ಷರಾದ ಎಲ್‌.ಶ್ರೀನಿವಾಸ್‌, ಸಿ.ದೇವರಾಜು, ಖಜಾಂಚಿ ಸಿ.ಮಾರೇಗೌಡ ಇದ್ದರು.