ಸಾರಾಂಶ
ವಿಧಾನಸೌಧ : ವಿಧಾನಮಂಡಲದ ಚಳಿಗಾಲದ 11ನೇ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಬೆಳಗ್ಗೆ 11ಕ್ಕೆ ಅಧಿವೇಶನ ವಿದ್ಯುಕ್ತವಾಗಿ ಆರಂಭವಾಗಲಿದೆ.
ಮೊದಲಿಗೆ ಸಂತಾಪ ಸೂಚನಾ ನಿರ್ಣಯ ಮಂಡನೆ ಮಾಡಲಿದ್ದು, ಕಳೆದ ಅಧಿವೇಶನದಿಂದ ಈಚೆಗೆ ನಿಧನಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಬಳಿಕ ಪ್ರಶ್ನೋತ್ತರ ಅವಧಿ ಕೈಗೆತ್ತಿಕೊಂಡು ಕಲಾಪ ಮುಂದೂಡಲಾಗುವುದು. ಮಧ್ಯಾಹ್ನ 3ಕ್ಕೆ ಕಲಾಪ ಸಲಹಾ ಸಮಿತಿ ಸಭೆ ನಡೆಸಿ ಮುಂದಿನ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವ ವಿಚಾರಗಳ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು.ಅಧಿವೇಶನದಲ್ಲಿ ವಕ್ಫ್, ಬಾಣಂತಿಯರ ಸಾವು ಮತ್ತಿತರ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಮತ್ತೊಂದೆಡೆ ಕೊರೋನಾ ಹಗರಣ ಕುರಿತ ಕುನ್ಹಾ ವರದಿ, ಬಿಜೆಪಿ ಹಗರಣಗಳು, ಬಿಎಸ್‌ವೈ ಲೈಂಗಿಕ ದೌರ್ಜನ್ಯದಂಥ ಪ್ರಕರಣ ಪ್ರಸ್ತಾಪಿಸಿ ತಿರುಗಿಬೀಳಲು ಆಡಳಿತರೂಢ ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ಹೀಗಾಗಿ ಸದನ ಕದನ ತೀವ್ರ ಕುತೂಹಲ ಕೆರಳಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಿರೀಕ್ಷಿಸಲಾಗಿದೆ.
15 ವಿಧೇಯಕ ಮಂಡನೆ
ವಿವಿಗಳಲ್ಲಿ ರಾಜ್ಯಪಾಲರ ಅಧಿಕಾರ ಮೊಟಕು, ಗಣಿ ತೆರಿಗೆ ಸೇರಿ 15 ಮಸೂದೆ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ.
ಅಧಿವೇಶನ ಮೊಟಕು?
ಮಂಡ್ಯ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಡಿ.20ರ ಬದಲು ಡಿ.19ರಂದೇ ಅಧಿವೇಶನ ಮೊಟಕು ಮಾಡುವ ಸಾಧ್ಯತೆ ಇದೆ.