ಮೇ 1ರಿಂದ ಪ್ರತಿ ಗುರುವಾರ ಹೊರತುಪಡಿಸಿ ಧಾರವಾಡದ ಗಾಂಧಿಶಾಂತಿ ಪ್ರತಿಷ್ಠಾನದ ಆವರಣದಲ್ಲಿ ಮಾವು ಮಾರಾಟ ಮಾಡಲಾಗುತ್ತಿದೆ. ಹು-ಧಾ ಅವಳಿ ನಗರದ ಮಾವು ಪ್ರಿಯರು ಈ ಮೇಳದಲ್ಲಿ ಮಾವು ಖರೀದಿಸಬಹುದು.

ಧಾರವಾಡ:

ಮಾವಿನ ಹಣ್ಣಿನ ಹಂಗಾಮು ಶುರುವಾಗಿದ್ದು, ಮಾವು ಪ್ರಿಯರಿಗೆ ನೈಸರ್ಗಿಕವಾಗಿ ಮಾಗಿಸಿದ ಹಾಗೂ ರಾಸಾಯನಿಕ ಮುಕ್ತ ಹಣ್ಣು ಒದಗಿಸಲು ಈ ಬಾರಿಯೂ ಮಾವು ಬೆಳೆಗಾರರ ಬಳಗವು ಧಾರವಾಡ ಆಪೂಸ್‌ ಹೆಸರಿನಲ್ಲಿ ಬೆಳೆಗಾರರಿಂದ ಬಳಕೆದಾರರಿಗೆ ನೇರ ಮಾರಾಟ ವ್ಯವಸ್ಥೆ ಮಾಡಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಳಗದ ಅಧ್ಯಕ್ಷ ಡಾ. ರಾಜೇಂದ್ರ ಪೋದ್ದಾರ, ಮೇ 1ರಿಂದ ಪ್ರತಿ ಗುರುವಾರ ಹೊರತುಪಡಿಸಿ ಗಾಂಧಿಶಾಂತಿ ಪ್ರತಿಷ್ಠಾನದ ಆವರಣದಲ್ಲಿ ಮಾವು ಮಾರಾಟ ಮಾಡಲಾಗುತ್ತಿದೆ. ಹು-ಧಾ ಅವಳಿ ನಗರದ ಮಾವು ಪ್ರಿಯರು ಈ ಮೇಳದಲ್ಲಿ ಮಾವು ಖರೀದಿಸಬಹುದು ಎಂದರು.

ಮಾವಿನ ಸಮಗ್ರ ಅಭಿವೃದ್ಧಿ, ಬೆಳೆಗಾರರಿಂದ ಉತ್ಕೃಷ್ಟ ಗುಣಮಟ್ಟದ ಮಾವು ಉತ್ಪಾದನೆ, ಬಳಕೆದಾರರಿಗೆ ಉತ್ತಮ ಗುಣಮಟ್ಟದ ಮಾವು ಸರಬರಾಜು, ಬೆಳೆಗಾರರ ಆದಾಯ ಹೆಚ್ಚಿಸುವುದು ಬಳಗದ ಉದ್ದೇಶವಾಗಿದ್ದು, ಸಂಘಟನೆಯ ಬಲದಿಂದ ಈಗಾಗಲೇ ಮಾವು ರಫ್ತು ಮಾಡಲಾಗುತ್ತಿದೆ. ಈ ಬಾರಿ ಗೋವಾ, ಮುಂಬೈ, ಬೆಂಗಳೂರಿನಿಂದ 10-15 ಖರೀದಿದಾರರು ಉತ್ಸುಕರಾಗಿದ್ದಾರೆ. ಸಂಘಟನೆಯ ಬಲದಿಂದ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಮಾವು ಪ್ಯಾಕ್‌ ಹೌಸ್‌ ಶುರು ಮಾಡಿದೆ. ಅಂತೆಯೇ, ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕಾರ್ಗೊ ವ್ಯವಸ್ಥೆ ಶುರುವಾದರೆ ಉತ್ತರ ಕರ್ನಾಟಕದ ಮಾವು ಸೇರಿ ಎಲ್ಲ ರೀತಿಯ ಕೃಷಿ, ತೋಟಗಾರಿಕೆ ಬೆಳೆಗಳ ರಫ್ತಿಗೆ ತುಂಬ ಅನುಕೂಲ ಆಗಲಿದೆ ಎಂದು ಡಾ. ಪೋದ್ದಾರ ಹೇಳಿದರು.

ಬಳಗದ ಸುಭಾಸ ಆಕಳವಾಡಿ, ಪ್ರಮೋದ ಗಾಂವಕರ್‌ ಮಾತನಾಡಿ, ಮಾವು ಬೆಳೆಗಾರರನ್ನು ಒಗ್ಗೂಡಿಸಿ ಐದು ವರ್ಷಗಳಿಂದ ಮಾವು ಅಭಿವೃದ್ಧಿ ಕಾರ್ಯಗಳನ್ನು ಬಳಗ ಮಾಡುತ್ತಿದೆ. ಧಾರವಾಡ ಹಾಗೂ ಸುತ್ತಲಿನ ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಾವು ಸಮೃದ್ಧವಾಗಿ ಬರುತ್ತಿದೆ. ಅದರಲ್ಲೂ ಧಾರವಾಡ ಆಪೂಸ್‌ ಬಂಗಾರದ ಬೆಳೆಯಾಗಿದ್ದು, ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಧಾರವಾಡ ಆಪೂಸ್‌ಗೆ ಅತ್ಯಂತ ಗೌರವದ ಬೆಲೆ ಇದೆ. ಬಳಗದಿಂದ ಈಗಾಗಲೇ ಕಳೆದ ವರ್ಷ ಸಿಂಗಾಪೂರಕ್ಕೆ ರಪ್ತು ಮಾಡಿದ್ದು, ಈ ಬಾರಿಯೂ 50 ಟನ್‌ ಮಾವು ಕಳುಹಿಸಲು ಸಿಂಗಾಪೂರದ ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆದಿದೆ ಎಂದರು.

ಈ ಬಾರಿ ಹವಾಮಾನ ವೈಪರೀತ್ಯದಿಂದ ಶೇ. 10ರಷ್ಟು ಮಾತ್ರ ಇಳುವರಿ ಬಂದಿದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಹಾನಿಯಾದ ಬೆಳೆಗೆ ಪರಿಹಾರ ಕೊಡಬೇಕು ಎಂದು ತೋಟಗಾರಿಕೆ ಇಲಾಖೆ ಸಚಿವರಿಗೆ ಮನವಿ ಮಾಡಿದ್ದು, ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದರು. ಸುದ್ದಿಗೋಷ್ಟಿಯಲ್ಲಿ ನಾಗರಾಜ ತಿಮ್ಮಾಪುರ, ಹನುಮಂತ ಸಾಲಿ ಇದ್ದರು.