ಇಂದಿನಿಂದ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಅಭಿಯಾನ

| Published : Nov 19 2024, 12:50 AM IST

ಸಾರಾಂಶ

ನಿರುಪಯುಕ್ತ ಸಮುದಾಯ ಶೌಚಾಲಯಗಳ ದುರಸ್ತಿ, ಮರು ಸ್ಥಾಪನೆ ಮತ್ತು ಪರಿಷ್ಕರಣೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.

ಕಾರವಾರ: ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆಗಳ ಪ್ರಯುಕ್ತ ಪ್ರಸ್ತುತ ವರ್ಷ ನಮ್ಮ ಶೌಚಾಲಯ ನಮ್ಮ ಗೌರವ ಎಂಬ ಶೀರ್ಷಿಕೆ ಹಾಗೂ ಅಂದದ ಶೌಚಾಲಯ ಆನಂದದ ಜೀವನ ಎಂಬ ಘೋಷವಾಕ್ಯದೊಂದಿಗೆ ನ. ೧೯ರಿಂದ ಡಿ. ೧೦ರ ವರೆಗೆ ಜಿಲ್ಲಾದ್ಯಂತ ವಿಶೇಷ ಆ೦ದೋಲನ ನಡೆಯಲಿದೆ.ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿವರ್ಷ ನ. ೧೯ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನವನ್ನು ಉಳಿಸಿಕೊಳ್ಳುವಲ್ಲಿ ಈ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತಿದೆ. ಈ ವಿಶೇಷ ಆಂದೋಲನದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾರ್ಯತ್ಮಕವಲ್ಲದ/ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತದೆ. ನೀರು ಮತ್ತು ನೈರ್ಮಲ್ಯ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಪ್ರಸ್ತುತ ಸ್ಥಿತಿಗತಿ ಮತ್ತು ತೆಗೆದುಕೊಳ್ಳಬೇಕಾದ ಪರಿಹಾರ/ಯೋಜನಾ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.ನಿರುಪಯುಕ್ತ ಸಮುದಾಯ ಶೌಚಾಲಯಗಳ ದುರಸ್ತಿ, ಮರು ಸ್ಥಾಪನೆ ಮತ್ತು ಪರಿಷ್ಕರಣೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳನ್ನು ಸುಂದರೀಕರಣಗೊಳಿಸಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಸಮುದಾಯವನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುವುದು. ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕೆಯನ್ನು ಉತ್ತೇಜನೆ, ವೈಯಕ್ತಿಕ ಗೃಹ ಶೌಚಾಲಯಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುತ್ತದೆ.

ವೈಯಕ್ತಿಕ ಗೃಹ ಶೌಚಾಲಯಗಳು ಮತ್ತು ಸಮುದಾಯ ಶೌಚಾಲಯಗಳ ಅಂತಿಮ ಸಮೀಕ್ಷೆ ಮಾಡಿ, ಶೌಚಾಲಯಗಳ ಕಾರ್ಯನಿರ್ವಹಣೆ, ಶೌಚಾಲಯಗಳನ್ನು ಅಂದಗೊಳಿಸಲು ಬಿಡಿಸಿರುವ ಚಿತ್ರಕಲೆ, ಗೋಡೆಬರಹ, ಸೌಂದರೀಕರಣ ಹಾಗೂ ಉತ್ತಮ ವೈಯಕ್ತಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳನ್ನು ಮೌಲ್ಯಮಾಪನ ಮಾಡಿ ಪುರಸ್ಕಾರ/ ನಗದು ಬಹುಮಾನ ನೀಡಲಾಗುತ್ತದೆ. ಗ್ರಾಪಂ ಹಂತದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ ಗೃಹ ಶೌಚಾಲಯ(ಉತ್ತಮ ಶೌಚಾಲಯ) ಸ್ಪರ್ಧೆ ಮತ್ತು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಮುದಾಯ ಶೌಚಾಲಯ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುತ್ತಿದೆ. ಜಿಲ್ಲೆಗಳಲ್ಲಿರುವ ಕೈಗಾರಿಕೆಗಳು, ಸ್ವಯಂಸೇವಾ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಇತರ ಸಾಂಸ್ಥಿಕ ಸಂಸ್ಥೆಗಳನ್ನು ಗುರುತಿಸಿ, ಈ ಆಂದೋಲನದ ಭಾಗವಾಗಿರುವ ಫಲಾನುಭವಿಗಳಿಗೆ ಪುರಸ್ಕಾರ ವಿತರಣೆ, ಶೌಚಾಲಯಗಳ ಸೌಂದರ್ಯಕರಣ ಪುರಸ್ಕಾರ ನೀಡಲಾಗುತ್ತಿದೆ.