ಯದುವಂಶದ ಗತಕಾಲದ ದಸರಾ ಮಹೋತ್ಸವ ವೈಭವ ಸಾರುವ, ಮೈಸೂರು ರಾಜವಂಶಸ್ಥರ ಖಾಸಗಿ ದರ್ಬಾರ್ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಅರಮನೆ ದರ್ಬಾರ್ ಹಾಲ್ ನಲ್ಲಿ ನಡೆಯಲಿದೆ.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಯದುವಂಶದ ಗತಕಾಲದ ದಸರಾ ಮಹೋತ್ಸವ ವೈಭವ ಸಾರುವ, ಮೈಸೂರು ರಾಜವಂಶಸ್ಥರ ಖಾಸಗಿ ದರ್ಬಾರ್ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಅರಮನೆ ದರ್ಬಾರ್ ಹಾಲ್ ನಲ್ಲಿ ನಡೆಯಲಿದೆ.

ಮೈಸೂರು ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಅ.11 ರಿಂದ 21 ರವರೆಗೆ ಖಾಸಗಿ ದರ್ಬಾರ್‌ಗಾಗಿ ಸಕಲ ಸಿದ್ಧತೆ ಮಾಡಲಾಗಿದೆ.

ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ಸಂಪ್ರದಾಯದಂತೆ ಖಾಸಗಿ ದರ್ಬಾರ್ ಅನ್ನು ಭಾನುವಾರ ಆರಂಭಿಸಲಿದ್ದು, ಅವರು 12ನೇ ಬಾರಿಗೆ ರತ್ನಖಚಿತ ಸಿಂಹಾಸನಾರೋಹಣ ಮಾಡಲಿದ್ದಾರೆ. ಯದುವೀರ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಬಳಿಕ ಮೂರನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ದಸರಾ ಖಾಸಗಿ ದರ್ಬಾರ್ ನಡೆಸಲು ಯದುವೀರ್ ಅವರಿಗೆ ಪತ್ನಿ ತ್ರಿಷಿಕಾ ಕುಮಾರಿ, ಪುತ್ರರಾದ ಆದ್ಯವೀರ್, ಯುಗಾಧ್ಯಕ್ಷ, ತಾಯಿ ಪ್ರಮೋದಾದೇವಿ ಒಡೆಯರ್, ಕುಟುಂಬ ವರ್ಗದವರು ಹಾಗೂ ಅರಮನೆಯ ಸಿಬ್ಬಂದಿ ಸಹಕಾರ ನೀಡಲಿದ್ದಾರೆ.ರಾಜ್ಯಾದ್ಯಂತ ಇಂದಿನಿಂದ ಶರನ್ನವರಾತ್ರಿ ಆಚರಣೆ:ಆಶ್ವೀಜ ಶುದ್ಧ ಪಾಡ್ಯ ನಿಮಿತ್ತ ಮೈಸೂರು ಸೇರಿದಂತೆ ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಭಾನುವಾರದಿಂದ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ಸಿಗಲಿದೆ.

ಐತಿಹಾಸಿಕ ಮಂಗಳೂರು ದಸರಾಕ್ಕೆ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಚಾಲನೆ ಸಿಗಲಿದೆ. ಐತಿಹಾಸಿಕ ಮಡಿಕೇರಿ ದಸರಾ ಕರಗ ಉತ್ಸವವು ಭಾನುವಾರ ಆರಂಭವಾಗಲಿದೆ. ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವಕ್ಕೆ ಭಾನುವಾರ ಚಾಲನೆ ದೊರೆಯಲಿದ್ದು, ಮಹೋತ್ಸವ ನಿಮಿತ್ತ ಪ್ರತಿದಿನ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ವಿಧಿ-ವಿಧಾನಗಳು ನೆರವೇರಲಿವೆ. ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾ ಪೀಠದಲ್ಲಿ ಶನಿವಾರವೇ ಶರನ್ನವರಾತ್ರಿ ಉತ್ಸವ ವಿದ್ಯುಕ್ತವಾಗಿ ಆರಂಭಗೊಂಡಿತು. ಮಹಾಲಯ ಅಮಾವಾಸ್ಯೆ ದಿನವಾದ ಶನಿವಾರ ಬೆಳಗ್ಗೆ ಪೀಠದ ಅಧಿದೇವತೆ ಶಾರದಾಂಬೆಗೆ ಮಹಾಭಿಷೇಕ ನೆರವೇರಿತು. ಮಹಾಭಿಷೇಕದ ನಂತರ ವೈಭವದ ದಸರಾಕ್ಕೆ ಅಧಿಕೃತ ಚಾಲನೆ ದೊರೆಯಿತು.

ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಳೆದ 2 ವರ್ಷದಿಂದ ತುಮಕೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.ಬೆಳಗಾವಿಯ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ ದುರ್ಗಾಮಾತಾ ದೌಡ್‌ಗೆ ಭಾನುವಾರ ಚಾಲನೆ ದೊರೆಯಲಿದೆ. ಇದೇ ವೇಳೆ, ಸವದತ್ತಿ ಯಲ್ಲಮ್ಮ, ಗೋಕರ್ಣದ ಮಹಾಬಲೇಶ್ವರ, ತುಮಕೂರು ಜಿಲ್ಲೆ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಸ್ಥಾನ ಸೇರಿ ರಾಜ್ಯದ ಇತರೆಡೆಯ ಶಕ್ತಿ ಕೇಂದ್ರಗಳಲ್ಲೂ ಭಾನುವಾರದಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ.