ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಿರಂತರ ಮಳೆ ಹಾಗೂ ಪ್ರವಾಹದಿಂದ ಆಗಿರುವ ಹಾನಿಯ ಕುರಿತು ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಹಾಗೂ ತ್ವರಿತಗತಿಯಲ್ಲಿ ಸಮೀಕ್ಷೆ ಮಾಡುತ್ತಿಲ್ಲ. ರಾಜ್ಯ ಸರ್ಕಾರದ ಈ ನಡೆ ಖಂಡಿಸಿ ರೈತರೊಂದಿಗೆ ಸೇರಿ ಬಿಜೆಪಿ ಅ.14ರಿಂದ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಹೋರಾಟಕ್ಕಿಳಿಯುತ್ತಿದೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಮಳೆಯಿಂದ ಹಾಗೂ ಪ್ರವಾಹದಿಂದಾಗಿ ರಾಜ್ಯದ ಉತ್ತರ ಕರ್ನಾಟಕದಲ್ಲಿನ 10 ಜಿಲ್ಲೆಗಳಲ್ಲಿ ಮುಂಗಾರು ಬೆಳೆ ಸೇರಿದಂತೆ, ಮನೆ, ಆಸ್ತಿಪಾಸ್ತಿಗಳೆಲ್ಲವೂ ಹಾನಿಯಾಗಿವೆ. ಸಣ್ಣ, ಮಧ್ಯಮ, ದೊಡ್ಡ ರೈತರು ಸೇರಿ ರಾಜ್ಯದಲ್ಲಿ 28,30,695 ರೈತರ 38,71,589 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದರು.ವಿಜಯಪುರ ಜಿಲ್ಲೆಯಲ್ಲಿ 3,42,203 ರೈತರ 7,60,266 ಹೆಕ್ಟೇರ್ ಬೆಳೆಗಳು ಹಾನಿಯಾಗಿವೆ. ಮಳೆ ಆರಂಭವಾಗಿ ಮೂರೂವರೆ ತಿಂಗಳಲ್ಲಿ ಸಿಎಂ ಅವರು ಒಂದೇ ಒಂದು ಜಿಲ್ಲೆಗೆ ಬರಲಿಲ್ಲ. ಕೇವಲ ವೈಮಾನಿಕ ಸಮೀಕ್ಷೆ ಮಾಡಿ ಹೋಗಿದ್ದಾರೆ. ಈ ಭಾಗದಲ್ಲಿ ರೈತರು ಬೆಳೆದ ತೊಗರಿ, ಹತ್ತಿ, ಈರುಳ್ಳಿ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿವೆ. ರಾಜ್ಯದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸರ್ಕಾರವೇ ಇಲ್ಲವಾಗಿದೆ. ಹಾಗಾಗಿ ಮಂಗಳವಾರದಿಂದ ಜಿಲ್ಲೆಯ ಸಿಂದಗಿಯಿಂದ ಸರ್ಕಾರದ ವಿರುದ್ಧ ಆರಂಭವಾಗಲಿರುವ ಹೋರಾಟ ಪ್ರತಿ ತಾಲೂಕು ಮಟ್ಟದಲ್ಲಿ ರೈತರೊಂದಿಗೆ ಒಂದು ದಿನದ ಸಾಂಕೇತಿಕ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ಬಿ.ಎಸ್.ಯಡಿಯೂರಪ್ಪನವರು ಸಿಎಂ ಇದ್ದಾಗ 2009 ಸೆ.4ರಂದು ಸುರಿದ ಮಳೆಯಿಂದಾಗಿ ಅತಿವೃಷ್ಟಿಯಾಗಿತ್ತು. ಆಗ ಸ್ವತಃ ಯಡಿಯೂರಪ್ಪನವರೇ ಪ್ರವಾಹ ಸ್ಥಳಗಳಿಗೆ ಪ್ರವಾಸ ಮಾಡಿ ಪರಿಹಾರ ಒದಗಿಸುವ ಕೆಲಸ ಮಾಡಿದ್ದರು. ಜಿಲ್ಲೆಯಲ್ಲಿ ಅವರು 68 ಗ್ರಾಮಗಳನ್ನು ಸ್ಥಳಾಂತರ ಮಾಡಿದ್ದರು. ಜೊತೆಗೆ ಎಲ್ಲ ಸಂತ್ರಸ್ತ ಸ್ಥಳಾಂತರ ಗ್ರಾಮಗಳಿಗೆ ಒಂದೇ ವರ್ಷದಲ್ಲಿ ರಸ್ತೆ, ವಿದ್ಯುತ್, ನೀರಿನ ವ್ಯವಸ್ಥೆ ಮಾಡಿದ್ದರು. ಅದರಂತೆ 2019ರಲ್ಲಿಯೂ ರಾಜ್ಯದ ಹಲವು ನದಿಗಳು ಉಕ್ಕಿ ಹರಿದು, ಪ್ರವಾಹ ಬಂದಾಗ ಯಡಿಯೂರಪ್ಪನವರೇ ಸಿಎಂ ಇದ್ದರು. ಆಗಲೂ ಸಹ ಅವರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೇರಿದಂತೆ ತುರ್ತಾಗಿ ಪರಿಹಾರ ಒದಗಿಸುವ ಕೆಲಸ ಮಾಡಿದ್ದರು ಎಂದು ವಿವರಿಸಿದರು.ಮೃತರಿಗೆ ₹5 ಲಕ್ಷ, ಮನೆ ಕುಸಿತಕ್ಕೆ ₹5 ಲಕ್ಷ ಪರಿಹಾರ ಕೊಟ್ಟರು. ಖುಷ್ಕಿ ಜಮೀನಿನ ಬೆಳೆ ಹಾನಿಗೆ ಹೆಕ್ಟೇರ್‌ಗೆ ₹16 ಸಾವಿರ ಕೊಟ್ಟರು, ನೀರಾವರಿ ಬೆಳೆಹಾನಿಗೆ ₹32,500 ಪರಿಹಾರ ಹಣ ಕೊಟ್ಟರು. ಹಾನಿಗೊಳಗಾದ ಕುಟುಂಬಗಳಿಗೆ ₹25 ಸಾವಿರ ಪರಿಹಾರ ಕೊಟ್ಟಿದ್ದಾರೆ. ಅದರಂತೆ ರಾಜ್ಯ ಸರ್ಕಾರ ಈ ಬಾರಿ ಹೆಚ್ಚಿನ ಪರಿಹಾರವನ್ನು ಒದಗಿಸುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಸಾಸನೂರ, ಮುಖಂಡ ವಿಜುಗೌಡ ಪಾಟೀಲ ಮಾತನಾಡಿದರು. ಪಾಲಿಕೆ ಸದಸ್ಯ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ವಿಜಯ ಜೋಶಿ, ಈರಣ್ಣ ರಾವೂರ, ಸಂಜಯ ಐಹೊಳ್ಳಿ ಇತರರು ಉಪಸ್ಥಿತರಿದ್ದರು.ಪ್ರವಾಹ ಹಾಗೂ ಮಳೆಹಾನಿಯ ಕುರಿತು ಪಾರದರ್ಶಕವಾಗಿ ಸಮೀಕ್ಷೆ ನಡೆಸುವುದು ಬಿಟ್ಟು. ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿತರಿಗೆ ಮಾತ್ರ ಪರಿಹಾರ ಕೊಡಿಸುವ ಕೆಲಸ ಆಗುತ್ತಿದೆ. ಹಾಗಾಗೀ ಇದನ್ನು ಉಸ್ತುವಾರಿ ಸಚಿವರು ಗಮನಹರಿಸಬೇಕು. ಸಂತ್ರಸ್ತರಲ್ಲೂ ರಾಜಕೀಯ ಮಾಡದೆ ತಕ್ಷಣವೇ ಇದನ್ನು ಸರಿಪಡಿಸಬೇಕು. ಸೂಕ್ತ ಪರಿಹಾರ ಕೊಡಿಸುವ ಕೆಲಸ ಮಾಡಬೇಕು ಎಂದು ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.