ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ

| Published : Feb 17 2024, 01:16 AM IST

ಸಾರಾಂಶ

ಮೂರು ಹಂತದಲ್ಲಿ ತಲಾ 36 ಸೂರ್ಯ ನಮಸ್ಕಾರ ಮಾಡಿದರು. 5 ನಿಮಿಷ ವಿರಾಮದ ವೇಳೆಯಲ್ಲಿ ಯೋಗಪಟುಗಳಿಗೆ ದಣಿವು, ಆಯಾಸ ನೀಗಿಸಲು ಬೆಲ್ಲ, ಒಣದ್ರಾಕ್ಷಿ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ನಂಜನಗೂಡು

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಅಂಗವಾಗಿ ಶುಕ್ರವಾರ ಮುಂಜಾನೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ಯೋಗಾಸಕ್ತರಿಂದ 108 ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆಯಿತು.

ಯೋಗ ಮಹಾಮನೆಯ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ ಮಾರ್ಗದರ್ಶನದಲ್ಲಿ 300ಕ್ಕೂ ಹೆಚ್ಚು ಯೋಗ ಬಂಧುಗಳು ಸಮವಸ್ತ್ರಧಾರಿಗಳಾಗಿ ಮೂರು ಹಂತದಲ್ಲಿ 50 ನಿಮಿಷದ ಅವಧಿಯಲ್ಲಿ 108 ಬಾರಿ ಆಸನ ಪ್ರದರ್ಶಿಸುವ ಮೂಲಕ ಸೂರ್ಯ ದೇವನಿಗೆ ಭಕ್ತಿ ಪೂರ್ವ ನಮನ ಸಲ್ಲಿಸಿದರು.

ಮೂರು ಹಂತದಲ್ಲಿ ತಲಾ 36 ಸೂರ್ಯ ನಮಸ್ಕಾರ ಮಾಡಿದರು. 5 ನಿಮಿಷ ವಿರಾಮದ ವೇಳೆಯಲ್ಲಿ ಯೋಗಪಟುಗಳಿಗೆ ದಣಿವು, ಆಯಾಸ ನೀಗಿಸಲು ಬೆಲ್ಲ, ಒಣದ್ರಾಕ್ಷಿ ವಿತರಣೆ ಮಾಡಲಾಯಿತು.

ಈ ವೇಳೆ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ ಮಾತನಾಡಿ, ವರ್ಷದಲ್ಲಿ ಒಮ್ಮೆಯಾದರೂ 108 ಸೂರ್ಯ ನಮಸ್ಕಾರ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಸೂರ್ಯನಿಗೆ ನಮಿಸುವುದರಿಂದ ಶಾರೀರಿಕವಾಗಿ, ಮಾನಸಿಕವಾಗಿ ನಾವು ಚೈತನ್ಯಭರಿತರಾಗುತ್ತೇವೆ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು ಸೂರ್ಯ ನಮಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎನ್.ಆರ್. ಗಣೇಶ್‌ ಮೂರ್ತಿ ಮಾತನಾಡಿ, 108 ಸೂರ್ಯ ನಮಸ್ಕಾರ ಮಾಡಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಸೂರ್ಯದೇವನ ಕೃಪೆಯಿದ್ದರೆ ಸರಳವಾಗಿ ಸುಸೂತ್ರವಾಗಿ ಮಾಡಬಹುದು ಎಂಬುದಕ್ಕೆ ನಮ್ಮ ಯೋಗಬಂಧುಗಳೇ ಸಾಕ್ಷಿಯಾಗಿದ್ದಾರೆ. ಕಳೆದ 16 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದು ತಿಳಿಸಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ. ರೇವಣ್ಣ, ನಂಜನಗೂಡು ಯೋಗ ಫೌಂಡೇಶನ್ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಶಾಖಾ ಪ್ರಮುಖರು ಹಾಗೂ ಯೋಗ ಶಿಕ್ಷಕರು ಭಾಗವಹಿಸಿದ್ದರು.