ದೊಡ್ಡಬಳ್ಳಾಪುರ: ಹಿಪ್ಪುನೇರಳೆಯಲ್ಲಿ ಪರಿಸರ ಸ್ನೇಹಿ ಕ್ರಮಗಳ ಮೂಲಕ ಕೀಟ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಗಂಗಸಂದ್ರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು

ದೊಡ್ಡಬಳ್ಳಾಪುರ: ಹಿಪ್ಪುನೇರಳೆಯಲ್ಲಿ ಪರಿಸರ ಸ್ನೇಹಿ ಕ್ರಮಗಳ ಮೂಲಕ ಕೀಟ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಗಂಗಸಂದ್ರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರದ ಜೇನುಕೃಷಿ ಪ್ರಾಧ್ಯಾಪಕ ಡಾ.ಜಿ.ಈಶ್ವರಪ್ಪ ಮಾತನಾಡಿ, ಟ್ರೆಕೋಡರ್ಮಾದಿಂದ ಪುಷ್ಟೀಕರಿಸಿದ ಕೊಟ್ಟಿಗೆ ಮತ್ತು ಬೇವಿನ ಹಿಂಡಿ ಬಳಕೆ ಮಹತ್ವ ಹಾಗೂ ಸವರಿಕೆಯಾದ 25 ದಿನಗಳ ನಂತರ ಪೋಷಣ್ ಸಿಂಪರಣೆ ಮಾಡಿರುವುದರಿಂದ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪನ್ನು ಪಡೆಯಲಾಗಿದೆ. ಸವರಿಕೆಯಾದ 15-20 ದಿನಗಳ ನಂತರ 5 ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪರಣೆ ಮಾಡಿರುವುದರಿಂದ ಹಿಪ್ಪುನೇರಳೆಗೆ ತಗುಲಿದ್ದ ರಸ ಹೀರುವ ಕೀಟಗಳ ಹತೋಟಿಯಾಗಿದೆ ಎಂದು ತಿಳಿಸಿದರು.

ಸಹಾಯಕ ಮುಖ್ಯ ತಾಂತ್ರಿಕ ಅಧಿಕಾರಿ ಎನ್.ಜಗದೀಶ್‌ ಮಾತನಾಡಿ, ಸಾಲಿನಿಂದ ಸಾಲಿಗೆ 8 ಅಡಿ ಮತ್ತು ಗಿಡದಿಂದ ಗಿಡಕ್ಕೆ 2 ಅಡಿ ಜೋಡಿ ಸಾಲು ಪದ್ಧತಿಯಲ್ಲಿ ನಾಟಿ ಮಾಡಿರುವುದರಿಂದ ಗುಣಮಟ್ಟದ ಸೊಪ್ಪನ್ನು ಉತ್ಪಾದಿಸುವುದರ ಜೊತೆಗೆ ಗುಣ ಮಟ್ಟದ ರೇಷ್ಮೆ ಗೂಡಿನ ಇಳುವರಿಯನ್ನು ಪಡೆಯಲಾಗಿದೆಯೆಂದು ತಿಳಿಸಿದರು.

ರೇಷ್ಮೆ ಸಹಾಯಕ ನಿರ್ದೇಶಕ ಕೆ.ಟಿ.ಪ್ರಭಾಕರ್ ಮಾತನಾಡಿ, ಪ್ರಸ್ತುತ ಕೃಷಿ ಉತ್ಪನ್ನಗಳ ಮಾರಾಟದ ಬೆಲೆಗೆ ಹೋಲಿಸಿದರೆ ರೇಷ್ಮೆಗೆ ಹೆಚ್ಚು ಬೇಡಿಕೆ ಇರುವುದರಿಂದ ಹೆಚ್ಚಿನ ರೈತರು ಹಿಪ್ಪುನೇರಳೆ ಬೆಳೆಯಲು ಆಸಕ್ತಿಹೊಂದಿದ್ದಾರೆ ಎಂದು ತಿಳಿಸಿದರು.

ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ವೈ.ಎಂ.ಗೋಪಾಲ್‌ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ

ಧ್ಯೇಯೋದ್ದೇಶಗಳನ್ನು ತಿಳಿಸಿ ಲಭ್ಯವಿರುವ ಸೇವೆಗಳನ್ನು ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ರೈತರಾದ ನಟರಾಜು, ರಾಧಾಕೃಷ್ಣ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆಯಂತೆ ಹಿಪ್ಪುನೇರಳೆಯಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಂಡಿರುವುದರಿಂದ ಥ್ರಿಪ್ಸ್ ಮತ್ತು ನುಸಿ ಕೀಟಗಳ ಬಾಧೆಯು ಹತೋಟಿಗೆ ಬಂದಿದ್ದು, ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನ ಇಳುವರಿ ಪಡೆದಿದ್ದು ಗುಣಮಟ್ಟದ ರೇಷ್ಮೆ ಗೂಡಿನ ಇಳುವರಿ ಪಡೆಯಲು ಅನುಕೂಲವಾಯಿತು ಎಂದು ತಿಳಿಸಿದರು.

ತೂಬಗೆರೆ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ವಿಸ್ತರಣಾಧಿಕಾರಿ ವಿ.ಮಧುಸೂದನ್ ಹಾಗೂ ಸುತ್ತಮುತ್ತಲಿನ ರೇಷ್ಮೆ ಬೆಳೆಗಾರರು ಭಾಗವಹಿಸಿದ್ದರು.

9ಕೆಡಿಬಿಪಿ2-

ಬೆಂಗಳೂರು ಗ್ರಾಮಾಂತರ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತಾಲೂಕಿನ ಗಂಗಸಂದ್ರ ಗ್ರಾಮದಲ್ಲಿ ಹಿಪ್ಪುನೇರಳೆಯಲ್ಲಿ ಪರಿಸರ ಸ್ನೇಹಿ ಕ್ರಮಗಳ ಮೂಲಕ ಕೀಟ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.