ತೋಟಗಾರಿಕೆ, ಕೃಷಿ ಇಲಾಖೆ, ಜಿಪಂ, ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಧಾರವಾಡ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ, ವಾಣಿಜ್ಯ ಮೇಳ, ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಎಲ್ಲಿ ನೋಡಿದರಲ್ಲಿ ಬಗೆಬಗೆಯ ಹೂಗಳ ರಾಶಿ, ವಿವಿಧ ತಳಿಗಳ ಸಸಿಗಳು. ಹಣ್ಣು- ತರಕಾರಿಯಲ್ಲಿ ಅರಳಿದ ಸಾಧಕರ ಚಿತ್ರಗಳು. ಹೂವಿನ ಕುಂಡಗಳ ನಡುವೆ ಮನಸೆಳೆಯುತ್ತಿರುವ ಸಾಲುಮರದ ತಿಮ್ಮಕ್ಕನ ಕಲಾಕೃತಿ.

ಇದು ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಶನಿವಾರದಿಂದ ಆರಂಭಗೊಂಡಿರುವ ಫಲ-ಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬದ ನೋಟ.

ತೋಟಗಾರಿಕೆ, ಕೃಷಿ ಇಲಾಖೆ, ಜಿಪಂ, ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಧಾರವಾಡ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ, ವಾಣಿಜ್ಯ ಮೇಳ, ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

16 ಅಡಿ ಎತ್ತರದ ಕೈಲಾಸ ಮಂಟಪ

ಇಂದಿರಾ ಗಾಜಿನ ಮನೆ ಉದ್ಯಾನಕ್ಕೆ ಕಾಲಿಡುತ್ತಿದ್ದಂತೆ ಕಣ್ಣಿಗೆ ಬೀಳುವುದೇ ಸುಮಾರು 16 ಅಡಿ ಎತ್ತರದಲ್ಲಿ ಬಗೆಬಗೆಯ ಪುಷ್ಪಗಳಿಂದ ಸಿದ್ಧಪಡಿಸಲಾಗಿರುವ ಶ್ರೀ ಸಿದ್ಧಾರೂಢ ಸ್ವಾಮಿಯ ಕೈಲಾಸ ಮಂಟಪ. ಜತೆಗೆ ಬಗೆಬಗೆಯ ಸಿರಿಧಾನ್ಯಗಳಿಂದ ಮಾಡಿರುವ ಸದ್ಗುರು ಸಿದ್ಧಾರೂಢಸ್ವಾಮಿ ಮೂರ್ತಿಯು ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ.

ಗಮನ ಸೆಳೆದ ತಿಮ್ಮಕ್ಕನ ಕಲಾಕೃತಿ

ಫಲಪುಷ್ಪ ಪ್ರದರ್ಶನದಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿರುವುದು ಸಾಲುಮರದ ತಿಮ್ಮಕ್ಕನ ಭಾವಚಿತ್ರವನ್ನು ಒಂದು ಮರಕ್ಕೆ ಅಳವಡಿಸಿ ಅದಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿರುವುದು. ಜತೆಗೆ ಸುತ್ತಲೂ ಬಗೆಬಗೆಯ ಹೂಕುಂಡಗಳನ್ನಿರಿಸಿ ಹಸಿರಿನ ಮಧ್ಯ ತಿಮ್ಮಕ್ಕ ಕಂಗೊಳಿಸುವಂತೆ ಮಾಡಿರುವುದು ಈ ಬಾರಿಯ ವಿಶೇಷ.

ನಾಲ್ಕನೆ ಮಂಗನಿಂದ ಪಾಠ:

ನೀತಿ ಹೇಳುವ ಮೂರು ಮಂಗಗಳ ಜತೆ ಮೊಬೈಲ್‌ ಗೀಳು ಬಿಂಬಿಸುವ ನಾಲ್ಕನೇ ಮಂಗ ಇಲ್ಲಿ ಕಾಣಿಸಿಕೊಂಡಿದ್ದು ಪ್ರಮುಖ ಆಕರ್ಷಣೆಯಾಗಿತ್ತು. ಯುವಕ- ಯುವತಿಯರು ಈ ನಾಲ್ಕು ಮಂಗಗಳ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಜತೆಗೆ ಗುಲಾಬಿ ಹೂವುಗಳಿಂದ ಸಿದ್ಧಪಡಿಸಿದ ಸೆಲ್ಪಿ ಸ್ಪಾಟ್, ಸ್ವಯಂಚಾಲಿತ ಸೂಕ್ಷ್ಮ ನೀರಾವರಿ ಮಾದರಿ, ಕಲ್ಲಂಗಡಿ ಹಣ್ಣಿನಲ್ಲಿ ಮೂಡಿದ ಮಹಾತ್ಮರ ಬಗೆ ಬಗೆಯ ಕೆತ್ತನೆಗಳು, ತೆಂಗಿನಕಾಯಿಗಳಲ್ಲಿ ಅರಳಿದ ಬಗೆಬಗೆಯ ಕಲಾಕೃತಿಗಳು.

ಮೀನುಗಾರಿಕಾ ಇಲಾಖೆಯಿಂದ ಮೀನುಕೃಷಿ ಹಾಗೂ ಅಕ್ವೇರಿಯಂನಲ್ಲಿ ವಿವಿಧ ಬಗೆಯ ಮೀನು ಸಾಕುವ ಕುರಿತು ಮಾಹಿತಿ ನೀಡಲಾಗುತ್ತಿದೆ. ಜಿಲ್ಲಾದ್ಯಂತ ಬೆಳೆಯುವ ವಿವಿಧ ತರಕಾರಿ, ಹಣ್ಣು ಹೂವುಗಳನ್ನು ಪ್ರದರ್ಶನಕ್ಕಿಡಲಾಗಿದೆ. ವಿವಿಧ ಜಾತಿಯ ಗಿಡಗಳು ಹಾಗೂ ಬಗೆಬಗೆಯ ಬೋನ್ಸಾಯ್ ಟ್ರೇಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.

ಮೇಳದಲ್ಲಿ 125 ರೈತರು ಸೇರಿದಂತೆ ಒಟ್ಟು 136 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕುಂಡಗಳ ವಿಭಾಗದಲ್ಲಿ ಕವಿವಿ, ಪಾಲಿಕೆ, ಕೆಎಂಸಿಆರ್‌ಐನಿಂದ 2300 ಹೂವಿನ ಕುಂಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 125 ರೈತರು ಹೂ, ಹಣ್ಣು ಹಾಗೂ ತರಕಾರಿ ತಂದಿದ್ದಾರೆ. ಬೊನ್ಸಾಯ ವಿಭಾಗದಲ್ಲಿ 4 ಜನ ಬಂದಿದ್ದಾರೆ. ಮೀನುಗಾರಿಕೆ ವಿಭಾಗದಿಂದ 15 ವಿವಿಧ ಬಗೆಯ ಮೀನುಗಳ ಪ್ರದರ್ಶನ ಮಾಡಲಾಗಿದೆ.

ಕೈಲಾಸ ಮಂಟಪದ ಮಾದರಿ

ಕಳೆದ ವರ್ಷಕ್ಕಿಂತ ವಿಭಿನ್ನವಾಗಿ ಈ ವರ್ಷದ ಫಲ- ಪುಷ್ಪಪ್ರದರ್ಶನ ಆಯೋಜಿಸಲಾಗಿದೆ. ಒಟ್ಟು136 ಸ್ಪರ್ಧಿಗಳು ಮೇಳಕ್ಕೆ ಬಂದಿದ್ದಾರೆ. ಈ ವರ್ಷ ಸಿರಿಧಾನ್ಯಗಳಿಂದ ಸದ್ಗುರು ಸಿದ್ಧಾರೂಢಸ್ವಾಮಿ ಮೂರ್ತಿ ಜತೆಗೆ ಹೂವುಗಳಿಂದ ಸಿದ್ಧಾರೂಢಸ್ವಾಮಿ ಮಠದ ಕೈಲಾಸ ಮಂಟಪದ ಮಾದರಿ ನಿರ್ಮಿಸಲಾಗಿದೆ ಎಂದು ಧಾರವಾಡ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.ಹೆಚ್ಚಿನ ಪ್ರಚಾರ

ಫಲ-ಪುಷ್ಪ ಪ್ರದರ್ಶನದಲ್ಲಿ ಮಳಿಗೆಗಳನ್ನು ನಿರ್ಮಿಸಿ ಗ್ರಾಮೀಣ ಭಾಗದ, ಸ್ವಸಹಾಯ ಸಂಘದವರು ಸಿದ್ಧಪಡಿಸಿದ ವಸ್ತುಗಳ ಪ್ರದರ್ಶನ, ಮಾರಾಟ ಮಾಡಲು ಸಹಕಾರಿಯಾಗಿದೆ. ನಿರೀಕ್ಷೆಯಂತೆ ಹೆಚ್ಚಿನ ಜನರು ವೀಕ್ಷಣೆಗೆ ಆಗಮಿಸುತ್ತಿಲ್ಲ. ಇನ್ನೂ ಹೆಚ್ಚಿನ ಪ್ರಚಾರ ದೊರೆತಲ್ಲಿ ವ್ಯಾಪರಸ್ಥರಿಗೆ ಸಹಕಾರಿಯಾಗಲಿದೆ ಎಂದು

ಉಪ್ಪಿನಬೆಟಗೇರಿಯ ವಿಶ್ವಪ್ರೇರಣಾ ಮಹಿಳಾ ಸ್ವಸಹಾಯ ಸಂಘದ ಝಾನ್ಸಿಲಕ್ಷ್ಮೀ ಪ್ರಕಾಶ ಹೂಗಾರ ತಿಳಿಸಿದರು.