ಸಾರಾಂಶ
ಜಿಲ್ಲಾಡಳಿತ ವತಿಯಿಂದ ಇಲ್ಲಿನ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರ ಆವರಣದಲ್ಲಿ ಜ. 25ರಿಂದ 27ರ ವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾಡಳಿತ ವತಿಯಿಂದ ಇಲ್ಲಿನ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ) ಆವರಣದಲ್ಲಿ ಜ.25ರಿಂದ 27ರ ವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.ಗುರುವಾರ ಪುಷ್ಪ ಹರಾಜು ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ವಿವರಗಳನ್ನು ನೀಡಿದರು. ಫಲಪುಷ್ಪ ಪ್ರದರ್ಶನವನ್ನು ಜ.25ರಂದು ಬೆಳಗ್ಗೆ 9.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸುವರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಫಲಪುಷ್ಪ ಪ್ರದರ್ಶನದಲ್ಲಿ 23 ಪ್ರಭೇದದ ಹೂವಿನ ಸುಮಾರು 7 ಸಾವಿರ ಹೂವಿನ ಸಸಿಗಳು ಮಾರಾಟಕ್ಕಿರುತ್ತವೆ. ಅಲ್ಲದೇ ಸುಮಾರು 1 ಲಕ್ಷ 5 ಸಾವಿರ ಗುಲಾಬಿ, ಸೇವಂತಿಗೆ, ಆರ್ಕಿಡ್ಸ್, ಲಿಲಿಯಮ್ ಹಾಗೂ ಮುಂತಾದ ಹೂವುಗಳನ್ನು ಬಳಸಿ ವಿವಿಧ ಕಲಾಕೃತಿಗಳನ್ನು ರಚಿಸಲಾಗುತ್ತದೆ ಎಂದರು.ಜ.25ರಂದು ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಹಾಗೂ ನಿರ್ವಹಣೆ ಹಾಗೂ 26ರಂದು ಕರಾವಳಿಗೆ ಸೂಕ್ತವಾದ ಹೊಸ ತೋಟಗಾರಿಕೆ ಬೆಳೆಗಳ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದವರು ಹೇಳಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಭುವನೇಶ್ವರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಪಂಚ ಗ್ಯಾರಂಟಿ ಕಲಾಕೃತಿ
ವಿವಿಧ ಪುಷ್ಪಗಳನ್ನು ಉಪಯೋಗಿಸಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಾದ ಅನ್ನ ಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಕಲಾಕೃತಿಗಳನ್ನೊಳಗೊಂಡ ಪ್ರದರ್ಶಿಕೆಗಳ ಪ್ರದರ್ಶನ, ಸುವರ್ಣ ಕರ್ನಾಟಕ ಸಂಭ್ರಮ ಪ್ರಯುಕ್ತ ಹೂವಿನಲ್ಲಿ ಅರಳಿದ ಕರ್ನಾಟಕದ ಪ್ರತಿಕೃತಿ, ಹೂವುಗಳಿಂದ ತಯಾರಿಸಿದ ವಿವಿಧ ಮಾದರಿಗಳು, ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಹೂವಿನ ಕುಂಡಗಳ ಜೋಡಣೆ ಏರ್ಪಡಿಸಲಾಗುವುದು.