ನಮ್ಮ ಭೂಮಿ ಹಕ್ಕಿನ ಬೇಡಿಕೆ ಈಡೇರಿಸಿ: ಕೊರಗರ ಒತ್ತಾಯ

| Published : Sep 04 2025, 01:01 AM IST

ಸಾರಾಂಶ

ಸಮಾಜ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ತಾಲೂಕು ಪಂಚಾಯತ್‌ ವತಿಯಿಂದ ಬುಧವಾರ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಕೊರಗರ ಅಭಿವೃದ್ಧಿ ಪರಿಶೀಲನಾ ಸಭೆ ನಡೆಯಿತು.

ಮಂಗಳೂರು: ದ.ಕ. ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗರ ಸಮಸ್ಯೆಗೆ ಪರಿಹಾರವಾಗಬೇಕಾದರೆ ಅತಿ ಮುಖ್ಯ ಬೇಡಿಕೆಯಾದ ‘ಭೂಮಿ ಹಕ್ಕಿನ’ ಬೇಡಿಕೆ ಇತ್ಯರ್ಥವಾಗಬೇಕು. ಭೂಮಿ ಇಲ್ಲದೆ ಯಾವುದೇ ಯೋಜನೆ ಮಾಡಲಾಗದು. ಭೂಮಿ ಒದಗಿಸಿ ಕೊರಗರಿಗೆ ಘನತೆಯ ಬದುಕು ಒದಗಿಸಿ ಎಂದು ಅಧಿಕಾರಿಗಳನ್ನು ಕೊರಗ ಮುಖಂಡರು ಒತ್ತಾಯಿಸಿದ ಘಟನೆ ಬುಧವಾರ ನಡೆಯಿತು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ತಾಲೂಕು ಪಂಚಾಯತ್‌ ವತಿಯಿಂದ ಬುಧವಾರ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಕೊರಗರ ಅಭಿವೃದ್ಧಿ ಪರಿಶೀಲನಾ ಸಭೆ ನಡೆಯಿತು.

1993ರಲ್ಲಿ ಕೊರಗರು ತಮ್ಮ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸಿದ ಬಳಿಕ ಡಾ. ಮಹಮ್ಮದ್‌ ಪೀರ್‌ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಅದನ್ನು ಅನುಷ್ಠಾನ ಮಾಡಿಲ್ಲ. ನಮ್ಮ ಅಭಿವೃದ್ಧಿಗಾಗಿ ಖರ್ಚು ಮಾಡುವ ಅನುದಾನ ನಮಗೆ ಸಿಗದಿದ್ದರೆ ನಮ್ಮ ಜನಾಂಗ ಮೇಲೆ ಬರುವುದಾರೂ ಹೇಗೆ ? ಸರ್ಕಾರದ ಹಲವು ಯೋಜನೆಗಳ ಹೊರತಾಗಿಯೂ ನಾವು ಇನ್ನೂ ಅಸ್ಪೃಶ್ಯರಾಗಿಯೇ ಉಳಿದಿದ್ದೇವೆ ಎಂದು ದ.ಕ. ಜಿಲ್ಲಾ ಕೊರಗ ಸಂಘಟನೆಯ ಸದಸ್ಯ ಸಂಜೀವ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಸಮಸ್ಯೆಗಳಿಗೆ ಕುರಿತಂತೆ ಶೀಘ್ರವೇ ತಹಶೀಲ್ದಾರ್‌ ಉಪಸ್ಥಿತಿಯಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಪಿಡಿಒಗಳ ಸಮಕ್ಷಮ ಪ್ರತ್ಯೇಕ ಸಭೆಯನ್ನು ನಡೆಸುವುದಾಗಿ ತಾ.ಪಂ. ಇಒ ಭರವಸೆ ನೀಡಿದರು.

ಕೊರಗರ ಜನಸಂಖ್ಯೆ ಕುಸಿತ

ಸಂಘದ ಅಧ್ಯಕ್ಷ ಸುಂದರ ಬೆಳುವಾಯಿ ಮಾತನಾಡಿ, ಭೂಮಿ ಹೊರತುಪಡಿಸಿ ನಮಗೆ ನೀಡುವ ಯಾವುದೇ ಯೋಜನೆ ಫಲಪ್ರದವಾಗದು. 2022ರಲ್ಲಿ ದ.ಕ. ಜಿಲ್ಲೆಯಲ್ಲಿ 4,458 ರಷ್ಟಿದ್ದ ಕೊರಗರ ಜನಸಂಖ್ಯೆ ಪ್ರಸಕ್ತ 3,700ಕ್ಕೆ ಕುಸಿದಿದೆ. ದೇಶದ 75 ಅತ್ಯಂತ ದುರ್ಬಲ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ಕೊರಗ ಸಮುದಾಯಕ್ಕೆ ಪಿಎಂ ಜನ್‌ಮನ್‌ ಯೋಜನೆಯಡಿ ಮೂಲಭೂತ ದಾಖಲೆಗಳನ್ನು ಒದಗಿಸಲು ಸೂಚಿಸಲಾಗಿದೆ. ಆದರೆ ಇದು ಪ್ರಚಾರಕ್ಕೆ ಮಾತ್ರವೇ ಆಗುತ್ತಿದೆ. ಇಂದಿಗೂ ನಮ್ಮಲ್ಲಿ ಜಾತಿ ಸರ್ಟಿಫಿಕೇಟ್‌ ಇಲ್ಲ. ವೋಟರ್‌ ಐಡಿ, ರೇಶನ್‌ ಕಾರ್ಡ್‌ ಇಲ್ಲದ ಕುಟುಂಬಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಅವರು ಒತ್ತಾಯಿಸಿದರು.