ಸಾರಾಂಶ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳನ್ನು ಶೀಘ್ರ ಜಾರಿಗೊಳಿಸುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಒತ್ತಾಯಿಸಿದರು.
ದೇವರಹಿಪ್ಪರಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೇಡಿಕೆಗಳು ನ್ಯಾಯಯುತವಾಗಿವೆ. ಹೀಗಾಗಿ ಅವುಗಳನ್ನು ಶೀಘ್ರ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಒತ್ತಾಯಿಸಿದರು.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.19ರಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಮಾಡಿದ್ದರು. ಜ.22ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ ಶಿಕ್ಷಕರ ವಿವಿಧ ಬೇಡಿಕೆಗಳಾದ 7ನೇ ವೇತನ ಆಯೋಗ ರಚನೆ, ಎನ್‌ಪಿಎಸ್ ಯೋಜನೆ ರದ್ದುಪಡಿಸಿಹಳೆ ಪಿಂಚಣಿ ಯೋಜನೆ ಜಾರಿಗೆ ತರಲು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಪ್ರತ್ಯೇಕ ವೇತನ ಶ್ರೇಣಿ, ಶಾಲಾ ರಜಾ ಅವಧಿಯಲ್ಲಿ ಬಿಎಲ್‌ಒ ಹಾಗೂ ಮೇಲ್ವಿಚಾರಕರಿಗೆ ಇಎಲ್ ನೀಡುವುದು ಮತ್ತು ಬಿಎಲ್‌ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಿಗೊಳಿಸುವುದು. ಸಿ ಮತ್ತು ಆರ್ ನಿಯಮ ತಿದ್ದುಪಡಿ ಮಾಡಿ ಪಿಎಸ್ ಟಿ ಪದವಿ ಪೂರೈಸಿದ ಶಿಕ್ಷಕರನ್ನು ಜಿಪಿಟಿ ವೃಂದದಲ್ಲಿ ಜ್ಯೇಷ್ಠತೆ ಆಧಾರದ ಮೇಲೆ ವಿಲೀನ ಮಾಡುವುದು. ಶಿಕ್ಷಕರ ಅನುಕೂಲಕ್ಕಾಗಿ ದೇವರಹಿಪ್ಪರಗಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸುವುದು ಸೇರಿದಂತೆ ಹಲವು ಬೇಡಿಕೆಗಳು ಶೀಘ್ರ ಜಾರಿಗೆ ತಂದು ಸರ್ಕಾರದ ಆದೇಶ ಹೊರಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಮನವಿ ಪತ್ರ ಸಲ್ಲಿಸಿ ಒತ್ತಾಯ ಮಾಡಿದ್ದಕ್ಕೆ ತಾಲೂಕು ಸರ್ಕಾರಿ ನೌಕರರ ಸಂಘ ಧನ್ಯವಾದ ಅರ್ಪಿಸಿದೆ.