ಗ್ರಾಮೀಣ ಅಂಚೆ ಸೇವಕರ ಮೂಲ ಬೇಡಿಕೆಗಳ ಈಡೇರಿಸಿ: ಮಹಾದೇವಯ್ಯ

| Published : May 20 2025, 11:56 PM IST

ಗ್ರಾಮೀಣ ಅಂಚೆ ಸೇವಕರ ಮೂಲ ಬೇಡಿಕೆಗಳ ಈಡೇರಿಸಿ: ಮಹಾದೇವಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಂತರ್ಜಾಲದ ಗಂಧವೇ ಇಲ್ಲದಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮೀಣ ಅಂಚೆ ಸೇವಕರ ಮೂಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಎಐಜಿಡಿಎಸ್‌ಯು ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಹಾದೇವಯ್ಯ ಹೇಳಿದರು.

ದ್ವೈ ವಾರ್ಷಿಕ ಅಧಿವೇಶನ । ಗ್ರಾಮೀಣ ಅಂಚೆ ಸೇವಕರ ಸಂಘದ 13ನೇ ಸಭೆ । ಜೂ.9ಕ್ಕೆ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಂತರ್ಜಾಲದ ಗಂಧವೇ ಇಲ್ಲದಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮೀಣ ಅಂಚೆ ಸೇವಕರ ಮೂಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಎಐಜಿಡಿಎಸ್‌ಯು ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಹಾದೇವಯ್ಯ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ 13ನೇ ದ್ವೈ ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಿಂದ ಗ್ರಾಮೀಣ ಅಂಚೆ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ದೇಶ ಸ್ವಾತಂತ್ರ್ಯಗೊಂಡು ಅಮೃತ ಮಹೋತ್ಸವ ಕಳೆದರೂ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಪ್ರಸ್ತುತ 1.39 ಲಕ್ಷ ಅಂಚೆ ಕಚೇರಿಗಳಲ್ಲಿ 3 ಲಕ್ಷಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು, ಅವರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದಿರುವುದು ನೋವಿನ ಸಂಗತಿ ಎಂದರು.

ಗ್ರಾಮೀಣ ನೌಕರರು ಅಂತರ್ಜಾಲವಿಲ್ಲದ ಪ್ರದೇಶಗಳಲ್ಲಿ ತೆರಳಿ ಸರ್ಕಾರದ ಸವಲತ್ತುಗಳಾದ ಮನೆ ಆರ್ಡರ್, ಕಾಗದ ಪತ್ರ ಹಾಗೂ ಜನಸಂಪರ್ಕ ಕೊಂಡಿಯಾದ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ. ಈ ಸೇವೆಯಲ್ಲಿ ಲಾಭ, ನಷ್ಟವನ್ನು ಗಮನಿಸಿ ಖಾಸಗೀಕರಣ ಮಾಡುವುದು ರಾಷ್ಟ್ರಕ್ಕೆ ದೊಡ್ಡ ಆತಂಕವಾಗಿದೆ ಎಂದರು.

ನೌಕರರಿಗೆ ಪಿಂಚಣಿ, ಆರೋಗ್ಯ ವಿಮೆ, ಕನಿಷ್ಟ ವೇತನವನ್ನು ಪೂರೈಸುತ್ತಿಲ್ಲ. ಕಳೆದ ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ 100 ಹಾಗೂ ದೇಶದಲ್ಲಿ 1500 ಸೇವಕರು ಮೃತರಾದರು. ಅವರ ಕುಟುಂಬಗಳಿಗೆ ಸರ್ಕಾರಗಳು ಪರಿಹಾರದ ಅಶ್ವಾಸನೆ ಹೊರತಾಗಿ ಆರ್ಥಿಕವಾಗಿ ನಯಾಪೈಸೆ ನೀಡಿಲ್ಲ ಎಂದು ಹೇಳಿದರು.

ದೇಶದಲ್ಲಿ ಅಂಚೆ ಕಚೇರಿಗಳನ್ನು ಮುಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆ. ಅಲ್ಲದೇ ಗ್ರಾಮೀಣ ಅಂಚೆ ಕಚೇರಿಗಳನ್ನು ತೆರವುಗೊಳಿಸಿ, ಜಿಲ್ಲಾ ಕೇಂದ್ರದಲ್ಲಿ ಏಕ ಮಾತ್ರ ಕಚೇರಿ ಸ್ಥಾಪಿಸಲು ಮುಂದಾಗುತ್ತಿದೆ. ಈ ವ್ಯವಸ್ಥೆಯನ್ನು ವಿರೋಧಿಸಿ ಜೂ.9 ರಂದು ಭಾರತಾದ್ಯಂತ ಆಯಾ ಅಂಚೆ ಕಚೇರಿಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದರು.

ಗ್ರಾಮೀಣ ಅಂಚೆ ಸೇವಕರ ಕಾನೂನು ಸಲಹೆಗಾರ ಎಸ್.ಎಸ್.ಮಂಜುನಾಥ್ ಮಾತನಾಡಿ, ಅಂಚೆ ಅಧಿಕಾರಿಗಳು ಹಾಗೂ ನೌಕರರ ನಡುವೆ ಉತ್ತಮ ಒಡನಾಟ ಅತಿಮುಖ್ಯ ಎಂದರು.

ಎಐಜಿಡಿಎಸ್‌ಯು ಜಿಲ್ಲಾಧ್ಯಕ್ಷ ಟಿ.ಸಿ.ಚಂದ್ರಪ್ರಕಾಶ್ ಮಾತನಾಡಿ, ಗ್ರಾಮೀಣ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ ಶೋಷಣೆ ಅನುಭವಿಸುತ್ತಿದ್ದಾರೆ. ಸೇವಕರ ಬೇಡಿಕೆಗಳನ್ನು ಸರ್ಕಾರ ಯಾವುದೇ ಹೆಚ್ಚುವರಿ ಅರ್ಥಿಕ ಹೊರೆಯಿಲ್ಲದೆ ಈಡೇರಿಸಬಹುದಾಗಿದ್ದು, ಕೇಂದ್ರ ಸರ್ಕಾರದ ಜನ ಪ್ರತಿನಿಧಿಗಳು ಗಮನ ಸೆಳೆಯಬೇಕು ಎಂದು ಹೇಳಿದರು.

ಸಂಘದ ಚಿಕ್ಕಮಗಳೂರು ವಿಭಾಗದ ಅಧೀಕ್ಷಕ ಎನ್.ಬಿ.ಶ್ರೀನಾಥ್, ಬೆಂಗಳೂರು ವಲಯಾಧ್ಯಕ್ಷ ಎಸ್.ಆರ್.ಭೈರಪ್ಪ, ಕಾರ್ಯದರ್ಶಿ ಎಚ್.ವಿ.ರಾಜ್‌ಕುಮಾರ್, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿ ವೈ.ಯು.ಗಂಗಾಧರ್, ಉಪಾಧ್ಯಕ್ಷ ಟಿ.ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಲೋಹಿತ್‌ಕುಮಾರ್, ಕಾರ್ಯದರ್ಶಿ ನವೀನ್ ಇತರರು ಹಾಜರಿದ್ದರು.