ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಮಂಡಳಿಯೂ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ.

ಹುಬ್ಬಳ್ಳಿ:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಘದ ಕಾರ್ಯಕರ್ತರು ಸೋಮವಾರ ಇಲ್ಲಿನ ಆರ್.ಎನ್. ಶೆಟ್ಟಿ ರಸ್ತೆಯ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರ ಕೂಡಲೇ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿದ ಆದೇಶ ಹಿಂಪಡೆಯಬೇಕು. 2 ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಬೇಕು. ಕಾರ್ಮಿಕರ ಹೊಸ ಕಾರ್ಡ್ ಮತ್ತು ನವೀಕರಣ ಮಾಡಿಕೊಳ್ಳುವುದನ್ನು ಸರಳೀಕರಣಗೊಳಿಸಬೇಕು. ನೈಜ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಮಂಡಳಿಯ ಘೋಷಿತ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಮಂಡಳಿಯೂ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕ ಕಿಟ್, ಟ್ಯಾಬ್, ಲ್ಯಾಪ್‌ಟಾಪ್ ಹಾಗೂ ಇಮ್ಯೂನಿಟಿ ಕಿಟ್ ವಿತರಣೆಯಲ್ಲಿ ಬಹಳಷ್ಟು ಅವ್ಯವಹಾರ ನಡೆದಿದ್ದು, ಅಂದಾಜು ₹ 8 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಕಾರ್ಮಿಕ ಮಂಡಳಿ ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶದಲ್ಲಿ ಹಲವಾರು ತಾಂತ್ರಿಕ ದೋಷಗಳಿದ್ದು, ಕೇವಲ ಒಂದು ದಾಖಲೆ ಲಗತ್ತಿಸದ ಕಾರಣಕ್ಕೆ, ಕಾರ್ಮಿಕರಿಗೆ ಸದಸ್ಯತ್ವ ಕಾರ್ಡ ದೊರೆಯುತ್ತಿಲ್ಲ. ಹೊಸ ತಂತ್ರಾಂಶ ವೃದ್ಧಿಸಿ ಎರಡು ವರ್ಷಗಳಾದರೂ ಇಲ್ಲಿಯ ವರೆಗೆ ಸಮರ್ಪಕವಾಗಿ ಅವು ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಅವುಗಳನ್ನು ಸರಿಪಡಿಸಬೇಕು. ಇಲ್ಲದೇ ಹೋದಲ್ಲಿ ಅದನ್ನು ರದ್ದುಗೊಳಿಸಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಯೋಗಪ್ಪ ಜೊತೆಪ್ಪನವರ ಮಾತನಾಡಿದರು. ನಂತರ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಂ.ಬಿ. ತಾಯದಾಸ್, ಮುಬಾರಕ, ರಫೀಕ ಗಂಜಿಗಟ್ಟಿ, ಮಹ್ಮದಗೌಸ್ ಕುಸುಗಲ್, ಅಶೋಕ ಭೈರಿಕೊಪ್ಪ, ಸಂಜೀವ್, ಮಂಜು ದಾಸನಕೊಪ್ಪ, ನೀಲಪ್ಪ ಕುರ್ಲಗೆರಿ ಸೇರಿದಂತೆ ಹಲವರಿದ್ದರು.