ಸಾರಾಂಶ
ಸರ್ಕಾರ ಬೇಗ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಅಲ್ಮೆರ, ಮೊಬೈಲ್ ಪೋನ್, ಗೂಗಲ್ ಕ್ರೋಮ ಬುಕ್, ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಸೇರಿದಂತೆ ಇತರ ಬೇಡಿಕೆ ಪೂರೈಸಬೇಕೆಂದು ಮನವಿ
ನರಗುಂದ: ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳ ಮಧ್ಯ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ನಮ್ಮ ಮೂಲಕ ಬೇಡಿಕೆ ಈಡೇರಿಸಬೇಕು ಎಂದು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಆನಂದ ಭೋವಿ ಹೇಳಿದರು.
ಅವರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಆವರಣದಲ್ಲಿ 2ನೇ ಹಂತದ ಮುಷ್ಕರದಲ್ಲಿ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳ ಮೊದಲನೆ ಹಂತದ ಹೋರಾಟ ಮಾಡುವ ಸಂದರ್ಭದಲ್ಲಿ ಸರ್ಕಾರ ಮುಖ್ಯ ಕಾರ್ಯದರ್ಶಿಗಳು ಸಾಧ್ಯವಾದಷ್ಟು ಬೇಗ ತಮ್ಮ ಬೇಡಿಕೆ ಈಡೇರಸುವ ಭರವಸೆ ನೀಡಿದ್ದರಿಂದ ನಾವು ಮುಷ್ಕರ ಹಿಂದಕ್ಕೆ ಪಡೆದು ಸೇವೆ ಸಲ್ಲಿಸುತ್ತಿದ್ದೇವೆ, ವರ್ಷ ಗತಿಸಿದರೂ ನಮ್ಮ ಬೇಡಿಕೆ ಸರ್ಕಾರ ಮಾನ್ಯತೆ ನೀಡದ್ದರಿಂದ ಇಂದು ಮತ್ತೆ ಮುಷ್ಕರ ಪ್ರಾರಂಭಿಸಿದ್ದೇವೆ, ಸರ್ಕಾರ ಬೇಗ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಅಲ್ಮೆರ, ಮೊಬೈಲ್ ಪೋನ್, ಗೂಗಲ್ ಕ್ರೋಮ ಬುಕ್, ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಸೇರಿದಂತೆ ಇತರ ಬೇಡಿಕೆ ಪೂರೈಸಬೇಕೆಂದು ಮನವಿ ಮಾಡಿಕೊಂಡರು.ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವದೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳಾದ ಎಸ್.ಎಂ. ಜಲಗೇರಿ, ಎಚ್.ಬಿ. ಮೇಲಿನಮನಿ, ಅನೀಲ ಹದಗಲ್, ಬಸವರಾಜ ಕುರಿ, ಐ.ವೈ. ಕಳಸಣ್ಣವರ, ಎಂ.ಬಿ. ಶೆಟ್ಟರ್, ಸವಿತಾ ಬನ್ನಿಗಿಡದ, ನಾಗಪ್ಪ ಚಿಕ್ಕಣ್ಣವರ, ಅಂಜಲಿ ಶೆಟ್ಟಿ ಸೇರಿದಂತೆ ಮುಂತಾದವರು ಇದ್ದರು.