ಕನ್ನಡಪ್ರಭ ವಾರ್ತೆ ಮಳವಳ್ಳಿ

ಚುನಾವಣೆ ವೇಳೆ ಕ್ಷೇತ್ರದ ಅಭಿವೃದ್ಧಿಗಾಗಿ ಕೊಟ್ಟ ಭರವಸೆ ಈಡೇರಿಸುವ ಮೂಲಕ ಮತದಾರರ ಋಣ ತೀರಿಸಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜವಾಬ್ದಾರಿ ಅರಿತು ಬದ್ಧತೆಯಿಂದ ಸರ್ಕಾರದ ಯೋಜನೆಗಳ ಮೂಲಕ ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಟೀಕೆ ಟಿಪ್ಪಣಿಗಳಿಗೆ ಸಾಧನೆಯೇ ಉತ್ತರವಾಗಿದೆ. ಜನರ ರಕ್ಷಣೆ ಹಾಗೂ ಭವಿಷತ್‌ನ್ನು ರೂಪಿಸುವ ಜವಾಬ್ದಾರಿಯಲ್ಲಿ ಹಂತ ಹಂತ ಕುಡಿಯುವ ನೀರು, ನೀರಾವರಿ, ಆರೋಗ್ಯ ಶಿಕ್ಷಣ, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ನಾವು ಉತ್ತರ ಕೊಡಬೇಕಿಲ್ಲ. ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ವಾಸ್ತವ ಅಂಶ ಜನರಿಗೆ ತಿಳಿದಿದೆ ಎಂದರು.

ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಅಂತಿಮಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೆರವೇರಿಸಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಎಸ್‌ಆರ್ ಅನುದಾನ ನೀಡಿದ ದಾನಿಗಳಿಗೆ ಸಾರ್ವಜನಿಕರ ಪರವಾಗಿ ಅಭಿನಂದನಾ ಸಮಾರಂಭ ಹಾಗೂ ಔತಣಕೂಟ ಹಮ್ಮಿಕೊಳ್ಳಲಾಗುವುದು ಎಂದರು.

ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ 10.35 ಕೋಟಿ ರು. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಬೊರ್‌ವೆಲ್ ಕೊರೆದಿರುವ 16 ಫಲಾನುಭವಿಗಳಿಗೆ ಪಂಪ್ ಮೋಟಾರ್ ವಿತರಿಸಲಾಗಿದೆ. ಏಕ್ಸಡ್‌ರವರ ಸಿಎಸ್‌ಆರ್ ಪಟ್ಟಣದ ಬಿಆರ್‌ಸಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.


ಮಳವಳ್ಳಿಯಲ್ಲಿ ಪ್ರಚೋದಾತ್ಮಕ ಘಟನೆಗಳು ನಡೆಯುತ್ತಿವೆ. ವಿನಾಕರಣ ಗೊಂದಲ ಸೃಷ್ಟಿಗೆ ಹೆಜ್ಜೆ ಇಟ್ಟರೇ ನಾವು ಉತ್ತರ ಕೊಡಬೇಕಾಗುತ್ತದೆ. ಪ್ರತಿಭಟನೆ ಮಾಡುತ್ತಿರುವವರಿಗೆ ಯಾರಾರ ಖಾತೆಗೆ ಎಷ್ಟು ಹಣ ಸಂದಾಯವಾಗಿದೆ ಎನ್ನುವುದರ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸಲಾಗುವುದು ಎಂದರು.

ಪ್ರಶ್ನೆ ಮಾಡುವುದು, ಪ್ರತಿಭಟನೆಗೆ ಅವಕಾಶವಿದೆ. ಆದರೆ, ನಮ್ಮ ಹೆಸರಿನಲ್ಲಿ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಹಾಗೂ ತೇಜೋವಧೆಗೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು, ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಕೆ.ಜೆ ದೇವರಾಜು, ಮುಖಂಡರಾದ ಮಾರ್ಕಾಲು ಮಾಧು, ಕ್ಷೇತ್ರ, ಮಹೇಶ್, ಪುಟ್ಟಸ್ವಾಮಿ, ಸಂತೋಷ್, ಕಿರಣ್ ಶಂಕರ್, ಸತೀಶ್, ಕೃಷ್ಣ, ಚೌಡಪ್ಪ,ಚೇತನ್ ಶಿಕ್ಷಣಾಧಿಕಾರಿ ವಿ.ಈ ಉಮಾ, ಲೋಕೋಪಯೋಗಿ ಇಲಾಖೆ ಎಇಇ ಸೋಮಶೇಖರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಇತರರು ಇದ್ದರು.