ಆರ್.ಎಸ್.ಎಸ್ ಎಲ್ಲಾ ಜಿಲ್ಲೆ ಮತ್ತು ಕೆಲ ತಾಲೂಕುಗಳಲ್ಲಿ ತನ್ನದೇ ಆದ ಕಚೇರಿಗಳನ್ನು ಹೊಂದಿರುತ್ತದೆ. ಅದರ ನಿರ್ವಹಣೆಗಾಗಿ ಸ್ಥಳೀಯವಾಗಿ ಟ್ರಸ್ಟ್‌ಗಳನ್ನು ಸ್ಥಾಪಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಅದಕ್ಕೆ ನಮ್ಮಲ್ಲಿ ಎಲ್ಲ ರೀತಿಯ ಲೆಕ್ಕ ಪತ್ರಗಳೂ ಪಾರದರ್ಶಕವಾಗಿವೆ. ಅವುಗಳನ್ನು ಯಾರು ಯಾವಾಗ ಬೇಕಾದರೂ ನೋಡಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಆಂದೋಲನದ ರೀತಿ ಸೇವಾ ಕಾರ್ಯದಲ್ಲಿ ತೊಡಗಿದೆ. ಇಂತಹ ಆಂದೋಲನಗಳಿಗೆ ನೋಂದಣಿ ಅವಶ್ಯಕತೆ ಇಲ್ಲ ಎಂದು ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ವಿಶ್ಲೇಷಿಸಿದರು.

ನಗರದ ಕೆವಿಎಸ್ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನಡೆದ ಪ್ರಮುಖ ನಾಗರಿಕ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ 19(1)ಸಿ ವಿಧಿಯ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ತಡೆ ಇಲ್ಲದೆ ಆಂದೋಲನಗಳಲ್ಲಿ ಭಾಗವಹಿಸುವ ಹಕ್ಕನ್ನು ನೀಡುತ್ತದೆ ಎಂದು ಪ್ರತಿಪಾದಿಸಿದರು.

ಯಾವುದೋ ಒಂದು ಊರಿನಲ್ಲಿ ಒಂದು ಹಬ್ಬ ಅಥವಾ ಜಾತ್ರೆ ಪ್ರತಿ ವರ್ಷವೂ ನಡೆಯುತ್ತದೆ. ಅದನ್ನು ಎಲ್ಲರೂ ಕೂಡಿ ಆಚರಿಸುತ್ತಾರೆ. ಪೂರ್ವಭಾವಿಯಾಗಿ ಎಲ್ಲರೂ ಕುಳಿತು ಚರ್ಚೆ, ಚಿಂತನೆ ಮಾಡುತ್ತಾರೆ. ಇದನ್ನು ನೋಂದಾಯಿಸಿಕೊಳ್ಳಬೇಕೆಂದೇನೂ ಇಲ್ಲ ಎಂದರು.

ಆರ್.ಎಸ್.ಎಸ್ ಎಲ್ಲಾ ಜಿಲ್ಲೆ ಮತ್ತು ಕೆಲ ತಾಲೂಕುಗಳಲ್ಲಿ ತನ್ನದೇ ಆದ ಕಚೇರಿಗಳನ್ನು ಹೊಂದಿರುತ್ತದೆ. ಅದರ ನಿರ್ವಹಣೆಗಾಗಿ ಸ್ಥಳೀಯವಾಗಿ ಟ್ರಸ್ಟ್‌ಗಳನ್ನು ಸ್ಥಾಪಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಅದಕ್ಕೆ ನಮ್ಮಲ್ಲಿ ಎಲ್ಲ ರೀತಿಯ ಲೆಕ್ಕ ಪತ್ರಗಳೂ ಪಾರದರ್ಶಕವಾಗಿವೆ. ಅವುಗಳನ್ನು ಯಾರು ಯಾವಾಗ ಬೇಕಾದರೂ ನೋಡಬಹುದು ಎಂದು ಇತ್ತೀಚೆಗೆ ರಾಜ್ಯ ಸಚಿವರೊಬ್ಬರು ಪ್ರಶ್ನಿಸುತ್ತಿರುವುದಕ್ಕೆ ದಿಟ್ಟವಾಗಿ ಉತ್ತರಿಸಿದರು.

ಅಖಂಡ ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ. ಇಲ್ಲಿ ಧರ್ಮ, ಪಂಥ, ಜಾತಿಗಳು ಬೇರೆಯಾಗಿರಬಹುದು. ಆದರೆ ಇಲ್ಲಿರುವ ಎಲ್ಲರೂ ಹಿಂದೂಗಳು. ಹಿಂದುತ್ವ ಅದೊಂದು ಜೀವನ ಪದ್ದತಿ, ದೃಷ್ಠಿ. ಈ ನೆಲದ ಮೂಲ ಚಿಂತನೆ. ಭೌಗೋಳಿಕವಾಗಿ ಪ್ರದೇಶ ರೀತಿಯಲ್ಲಿ ಆ ಶಬ್ದ ಬಳಸಲಾಗಿದೆ. ಇಂದಿನ ಭಾರತ ಹಿಂದೂ ರಾಷ್ಟ್ರವಾಗಿದೆ ಎಂದು ಪ್ರತಿಪಾದಿಸಿದರು.

ನಮ್ಮ ಪೂರ್ವಜರೆಲ್ಲರೂ ಹಿಂದೂಗಳೇ ಆಗಿದ್ದರು. ಧರ್ಮ, ಸಂಸ್ಕೃತಿ, ಸಮಾಜ, ಧರ್ಮಚಿಂತನೆಗಳಿಂದ ಹಿಂದುವಾಗಿ ಗುರುತಿಸಲಾಗಿದೆ. ಇದನ್ನು ಬಿಟ್ಟರೆ ಅನೇಕ ರೀತಿಯ ವ್ಯಾಖ್ಯಾನಗಳನ್ನೂ ಮಾಡುತ್ತಾರೆ. ಆದರೆ ಅಂತಹ ವ್ಯಾಖ್ಯಾನಗಳನ್ನು ಸಂಘ ಒಪ್ಪಿಕೊಂಡಿಲ್ಲ ಎಂದು ಹೇಳಿದರು.

ಜಾತಿ ಆಧಾರಿತ ಸಮಾಜವನ್ನು ಸಂಘ ಒಪ್ಪಿಲ್ಲ. ಸಮಾಜದಲ್ಲಿ ಅಸ್ಪಶ್ಯತೆ ಇದೆ. ಇದನ್ನೂ ಸಹಿಸಲ್ಲ. ಜಾತಿ ವಿಷಮತೆಯೂ ಇದೆ. ಸಂಘದಲ್ಲಿ ನಾವೆಲ್ಲ ಪರಸ್ಪರ ಸಾಮರಸ್ಯದಿಂದ ಬದುಕಬೇಕು. ಜಾತಿ ಆಧಾರದ ಮೇಲ ವ್ಯವಹಾರ ಮಾಡುವುದಿಲ್ಲ. ಕೆಲವು ಕಡೆ ಇಂತಹ ಜಾತಿ ಆಧಾರಿತ ವಿಷವನ್ನು ತೊಡೆದು ಹಾಕಬೇಕು. ಸಂಘ ಪ್ರಸ್ತುತ ಸಮಾಜದಲ್ಲಿ ಸಾಮರಸ್ಯ, ಕುಟುಂಬ ಪ್ರಭೋದನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ, ನಾಗರೀಕ ಕರ್ತವ್ಯ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಇದೇ ವೇಳೆ ನಾಗರೀಕರೊಂದಿಗೆ ಸಂವಾದ ನಡೆಸಿದರು. ಸಂಪರ್ಕ ಪ್ರಮುಖ್ ದೊಡ್ಡಾಚಾರ್ ಪ್ರಸ್ತಾವನೆ ಮಾಡಿದ್ದರು. ಜಿಲ್ಲಾ ಸಂಚಾಲಕ ರವಿಕುಮಾರ್ ಇದ್ದರು.