ಜನತೆಯ ಆಶಯವನ್ನು ಈಡೇರಿಸುವೆ: ಕಾಗೇರಿ

| Published : Jun 20 2024, 01:03 AM IST

ಸಾರಾಂಶ

ಮತದಾರರು ಯಾವುದೇ ಆಸೆ ಆಮಿಷಕ್ಕೊಳಗಾಗದೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪಕ್ಷದಲ್ಲಿದ್ದ ಜೊಳ್ಳು ಕಾಳು ಹೋಗಿದ್ದು, ಗಟ್ಟಿ ಕಾರ್ಯಕರ್ತರು ಮಾತ್ರ ಉಳಿದಿಕೊಂಡಿದ್ದು, ಪಕ್ಷ ಮತ್ತಷ್ಟು ಗಟ್ಟಿಯಾಗಿದೆ.

ಮುಂಡಗೋಡ: ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕೆಂಬ ಜನರ ಹಠ ಮತ್ತು ಸ್ವಾಭಿಮಾನದ ಮತದಿಂದ ಗೆದ್ದಿರುವ ನನ್ನ ಜವಾಬ್ದಾರಿ ಹೆಚ್ಚಿದ್ದು, ಕ್ಷೇತ್ರದ ಜನರು ನನಗೆ ಹೇಳಲಿ ಬಿಡಲಿ, ಕ್ಷೇತ್ರದ ಅಭಿವೃದ್ದಿ ಕೆಲಸವನ್ನು ಮಾಡೇ ಮಾಡುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.ಬುಧವಾರ ಸಂಜೆ ಪಟ್ಟಣದ ನಗರಸಭಾ ಭವನದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಕರೆಸಿ ಪ್ರಚಾರ ಮಾಡಿ ಹಣಬಲದಿಂದ ಮತ ಪಡೆಯಲು ಹೊರಟಿದ್ದವರಿಗೆ ಮುಂಡಗೋಡನ ಸ್ವಾಭಿಮಾನದ ಜನ ರಾಷ್ಟ್ರೀಯ ವಿಚಾರವನ್ನಿಟ್ಟುಕೊಂಡು ಬಿಜೆಪಿಗೆ ಮತ ಚಲಾಯಿಸಿ ಕಾಂಗ್ರೆಸ್ ತಕ್ಕ ಉತ್ತರ ನೀಡಿದ್ದಾರೆ. ಮತದಾರರು ಯಾವುದೇ ಆಸೆ ಆಮಿಷಕ್ಕೊಳಗಾಗದೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪಕ್ಷದಲ್ಲಿದ್ದ ಜೊಳ್ಳು ಕಾಳು ಹೋಗಿದ್ದು, ಗಟ್ಟಿ ಕಾರ್ಯಕರ್ತರು ಮಾತ್ರ ಉಳಿದಿಕೊಂಡಿದ್ದು, ಪಕ್ಷ ಮತ್ತಷ್ಟು ಗಟ್ಟಿಯಾಗಿದೆ ಎಂದರು.ಹಿಂದೆ ಆಗದ ಅಭಿವೃದ್ಧಿಯನ್ನು ಕೆಲಸವನ್ನು ಮಾಡುವಂತೆ ನನಗೆ ಮತ ನೀಡಿರುವ ಜನತೆಯ ಆಶಯವನ್ನು ಈಡೇರಿಸುವುದಾಗಿ ಹೇಳಿದ ಅವರು, ಹಿಂದೆ ಶಿಕ್ಷಣ ಸಚಿವ ಹಾಗೂ ಸಭಾಧ್ಯಕ್ಷನಾಗಿ ಜಿಲ್ಲೆಗೆ ಅಗತ್ಯವಿರುವ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಶಿರಸಿ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಲಾಗಿದೆ. ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ತಪ್ಪಿಸಿ ೨೪ ಗಂಟೆ ವಿದ್ಯುತ್ ಪೂರೈಕೆಗೆ ಕಾರಣಿಕರ್ತನಾಗಿದ್ದು, ಅನೇಕ ಕೆಲಸವನ್ನು ಮಾಡಿದ್ದೇನೆ. ಮುಂದೆಯೂ ಅಭಿವೃದ್ಧಿ ಪರವಾಗಿರುತ್ತೇನೆ ಎಂದರು.ಮುಂಡಗೋಡದಲ್ಲಿ ಅಭಿವೃದ್ಧಿ ಕೆಲಸವಾಗಿದೆ ಎಂದರೆ ಅದು ಹಿಂದಿನ ಬಿಜೆಪಿ ಸರ್ಕಾರದಲ್ಲಿ. ಈ ಸರ್ಕಾರ ಹಾಗೂ ಈಗಿರುವ ಕಾಂಗ್ರೆಸ್ ಶಾಸಕರಿಂದ ಏನು ಆಗಿಲ್ಲ ಎಂದು ಶಿವರಾಮ ಹೆಬ್ಬಾರ ಅವರಿಗೂ ಟಾಂಗ್ ನೀಡಿದ ಅವರು, ಬಿಜೆಪಿ ಚಿಹ್ನೆಯಿಂದ ಗೆದ್ದು ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಮಡಬೇಕಾದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಶಿವರಾಮ ಹೆಬ್ಬಾರ ಅವರ ನಡೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತಹದ್ದಲ್ಲ. ಪಕ್ಷದ ತತ್ವ ಸಿದ್ಧಾಂತ ಒಪ್ಪಿಗೆಯಾಗದಿದ್ದಲ್ಲಿ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು. ಅದು ಬಿಟ್ಟು ಉಚ್ಚಾಟನೆ ಮಾಡಿದರೆ ತಮ್ಮ ಸ್ಥಾನ ಉಳಿಸಿಕೊಳ್ಳಬಹುದೆಂಬ ಉದ್ದೇಶದಿಂದ ತಮ್ಮ ಬೆಂಬಲಿಗರಿಂದ ಉಚ್ಚಾಟನೆ ಮಾಡಲಿ ಎಂದು ಹೇಳಿಸುತ್ತಿದ್ದಾರೆ. ಅವರಿಗೆ ಚುನಾವಣೆಗೆ ಹೋಗಲು ಧೈರ್ಯವಿಲ್ಲ. ಹಾಗಾಗಿ ಇಂತಹ ನಡೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ರಾಜಕೀಯ ಗೊಂದಲದ ನಡುವೆಯೂ ಎದೆಗುಂದದೆ ಹಗಲಿರುಳು ಶ್ರಮಿಸಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ ಕೀರ್ತಿ ನಮ್ಮ ಜಿಲ್ಲೆಯ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರುಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಶಿವಾಜಿ ನರ್ಸಾನಿ, ಬಸವರಾಜ ಓಶಿಮಠ, ಶ್ರೀಕಾಂತ ಸಾನು, ಮಹೇಶ ಹೊಸಕೊಪ್ಪ, ಅಶೋಕ ಚಲವಾದಿ, ಜಯಸುಧಾ ಭೋವಿ, ಸಿ.ಕೆ. ಅಶೋಕ, ವಿನಾಯಕ ರಾಯ್ಕರ, ರೇಖಾ ಅಂಡಗಿ, ಮಂಜುನಾಥ ಶೇಟ್, ಗುರುರಾಜ ಕಾಮತ, ಬಸವರಾಜ ಠಣಕೇದಾರ, ನಿರ್ಮಲಾ ಬೆಂಡ್ಲಗಟ್ಟಿ, ಸುವರ್ಣ ಕೊಟಗುಣಸಿ, ಶಕುಂತಲಾ ನಾಯಕ, ಅಡವಯ್ಯ ಸಂಗೂರಮಠ, ಪಿ.ಜಿ. ತಂಗಚ್ಚನ್, ಲೇಸಮ್ಮ ಥಾಮಸ್, ವೀಣಾ ಓಶಿಮಠ, ಹಾಲಪ್ಪ ಕೋಡಣ್ಣವರ ಮುಂತಾದವರು ಉಪಸ್ಥಿತರಿದ್ದರು. ಭರತರಾಜ ಹದಳಗಿ ಸ್ವಾಗತಿಸಿದರು, ವಿಠ್ಠಲ್ ಬಾಳಂಬೀಡ ನಿರೂಪಿಸಿದರು.