ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಭರವಸೆಯ 5 ಗ್ಯಾರಂಟಿ ಈಡೇರಿಕೆ: ಟಿ.ಡಿ.ರಾಜೇಗೌಡ

| Published : Feb 11 2024, 01:45 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆಂದು ಕರ್ನಾಟಕ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

- ತಾಲೂಕು ಕಚೇರಿ ಆವರಣದಲ್ಲಿ ಗ್ರಾರಂಟಿ ಯೋಜನೆಗಳ ಪಲಾನುಭವಿಗಳ ಸಮಾವೇಶ- ಶಾಸಕರ ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆಂದು ಕರ್ನಾಟಕ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶನಿವಾರ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಪಂ ಆಶ್ರಯದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಶಾಸಕರ ಜನ ಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರಸಿಂಹರಾಜಪುರ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕದ 20, 617 ಮನೆಗಳಲ್ಲಿ 19,651 ಮನೆಗಳಿಗೆ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿದ್ದು ಅವರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕೇವಲ 1 ಸಾವಿರ ಜನರಿಗೆ ತಾಂತ್ರಿಕ ಕಾರಣದಿಂದ ಉಚಿತ ವಿದ್ಯುತ್‌ ನೀಡಲಾಗಿಲ್ಲ. ಇದನ್ನೂ ಬಗೆಹರಿಸಲಾಗುವುದು. ನರಸಿಂಹ ರಾಜಪುರ ತಾಲೂಕಿನಲ್ಲಿ ಉಚಿತ ವಿದ್ಯುತ್‌ಗೆ 6.85 ಲಕ್ಷ ರು. ಪ್ರತಿ ತಿಂಗಳು ಖರ್ಚು ಮಾಡುತ್ತಿದ್ದೇವೆ. ಚಿಕ್ಕಮಗಳೂರು ಜಿಲ್ಲೆಗೆ 10 ಕೋಟಿ ರು. ಮಾಡುತ್ತಿದ್ದೇವೆ ಎಂದರು. ಗೃಹಲಕ್ಷ್ಮಿ ಯೋಜನೆಯಡಿ ನರಸಿಂಹರಾಜಪುರ ತಾಲೂಕಿನಲ್ಲಿ ಇರುವ 16,620 ರೇಷನ್‌ ಕಾರ್ಡುಗಳಲ್ಲಿ 15,101 ಮಹಿಳೆಯರು ನೋಂದಣಿ ಮಾಡಿಸಿದ್ದು,ಪ್ರಸ್ತುತ 14, 026 ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರು. ನೀಡುತ್ತಿದ್ದೇವೆ. ಇದಕ್ಕಾಗಿ ನರಸಿಂಹರಾಜಪುರ ತಾಲೂಕಿನಲ್ಲಿ ಪ್ರತಿ ತಿಂಗಳು 2.80 ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದರು.ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೂ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಅದರಂತೆ ಕೇಂದ್ರದಿಂದ ಖರೀದಿಗೆ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ರಾಜಕೀಯ ಕಾರಣದಿಂದ ಅಕ್ಕಿ ನೀಡಲಿಲ್ಲ. ಈಗ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿಗೆ ಹಣವನ್ನು ಬಡವರ ಖಾತೆಗೆ ಹಾಕುತ್ತಿದ್ದೇವೆ. ನರಸಿಂಹರಾಜಪುರ ತಾಲೂಕಿನಲ್ಲಿ 14,647 ಅಂತ್ಯೋದಯ ಕಾರ್ಡುಗಳಿದ್ದು ಪ್ರತಿ ತಿಂಗಳು ಕಾರ್ಡು ದಾರರಿಗೆ 2, 583 ಕ್ವಿಂಟಾಲ್‌ ಅಕ್ಕಿ ಹಾಗೂ 68,052 ಸಾವಿರ ರು. ಅವರ ಖಾತೆಗೆ ಹಾಕಲಾಗುತ್ತಿದೆ ಎಂದರು.ಪ್ರತಿ ಕುಟುಂಬಕ್ಕೆ 5100 ರು. 4 ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5100 ರು. ನೀಡುತ್ತಿದ್ದೇವೆ. ಯುವನಿಧಿ ಸೇರಿದರೆ ಪ್ರತಿ ಕುಟುಂಬಕ್ಕೆ 8400 ರು. ಸಿಗಲಿದೆ. ಕೇಂದ್ರದಿಂದ ತೆರಿಗೆ ಹಣದಲ್ಲಿ ಕಾನೂನು ಬದ್ಧವಾಗಿ ರಾಜ್ಯಕ್ಕೆ 66 ಸಾವಿರ ಕೋಟಿ ರು. ಬರಬೇಕಾಗಿದೆ. ದೆಹಲಿಯಲ್ಲಿ ರಾಜ್ಯ ಸರ್ಕಾರದಿಂದ ನಮ್ಮ ತೆರಿಗೆ ಹಣ ನಮಗೆ ನೀಡಬೇಕು ಎಂದು ಪ್ರತಿಭಟನೆ ಮಾಡಿದ್ದೆವು. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿಲ್ಲ. ಶೃಂಗೇರಿ ಕ್ಷೇತ್ರದಲ್ಲಿ ಶೇ.100 ರಷ್ಟು ಲೋಕೋಪಯೋಗಿ ರಸ್ತೆಯ ಗುಂಡಿ ಮುಚ್ಚಲಾಗಿದೆ. ಮನೆ,ಮನೆಗೆ ನೀರು ಕೊಡುವ ಜೆಜೆಎಂ ಯೋಜನೆಯಡಿ 155 ಕೋಟಿ ರು. ಮಂಜೂರಾಗಿದ್ದು ಈಗಾಗಲೇ 80 ಕೋಟಿ ರು. ಖರ್ಚು ಮಾಡಲಾಗಿದೆ ಎಂದರು. ಸಭೆಯಲ್ಲಿ ತಹಸೀಲ್ದಾರ್‌ ತನುಜಾ ಟಿ.ಸವದತ್ತಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಆಡುವಳ್ಳಿ ಗ್ರಾಪಂ ಸದಸ್ಯ ಗೇರ್‌ ಬೈಲು ನಟರಾಜ್, ಬಾಳೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ಕೆ.ಟಿ.ನಾಗರತ್ನ, ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್‌, ಕಾನೂರು ಗ್ರಾಪಂ ಅಧ್ಯಕ್ಷ ಮನೋಹರ್‌, ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್‌, ಮಾಗುಂಡಿ ಗ್ರಾಪಂ ಅಧ್ಯಕ್ಷ ಅಬ್ದುಲ್‌ ಲತೀಫ್‌, ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಉಮಾ ಕೇಶವ್‌, ವಸೀಂ, ಸೋಜ, ಜಿಪಂ ಮಾಜಿ ಸದಸ್ಯ ಪಿ.ಆರ್‌. ಸದಾಶಿವ, ತಾಲೂಕು ಬಗರ್‌ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಕೊಪ್ಪ ಡಿವೈಎಸ್‌ಪಿ ಅನಿಲ್‌ ಕುಮಾರ್‌, ತಾಪಂ ಇ.ಒ.ನವೀನ್‌ ಕುಮಾರ್‌ , ಧನಂಜಯ ಮೇಧೂರ , ಡಯನಾ ಹಾಗೂ ನಾಗರಾಜ್‌ , ತಿಮ್ಮೇಶ್ ಇದ್ದರು. --- ಬಾಕ್ಸ್ --- ಪರಿಕರಗಳ ಕಿಟ್‌ ವಿತರಣೆ

ಗ್ಯಾರಂಟಿ ಯೋಜನೆ ಫಲಾನುಭವಿಗಳಾದ ಮೋಹಿನಿ,ಶೈಲಾ ಚಾರ್ಲ್ಸ, ಭಾನುಮತಿ,ಅನಿತಾ ಪೆರಿರಾ,ಶೈಲಾ ಮತ್ತಿತರರು ತಮ್ಮ ಅನುಭವ ಹಂಚಿಕೊಂಡರು. ಸಮಾವೇಶದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ತಮಗೆ ಹಕ್ಕು ಪತ್ರ ಸಿಕ್ಕಿಲ್ಲ, ಅರಣ್ಯ ಇಲಾಖೆಯವರು ನೊಟೀಸ್ ನೀಡಿದ್ದಾರೆ. ಮಾಸಾಶನ ಬಂದಿಲ್ಲ ಮುಂತಾದ ಸಮಸ್ಯೆಗಳನ್ನು ಹೇಳಿಕೊಂಡರು. ಜನ ಸಂಪರ್ಕ ಸಭೆಯಲ್ಲಿ ಕಂದಾಯ ಸಂಬಂಧಪಟ್ಟಂತೆ ಹಕ್ಕುಪತ್ರ ನೀಡಿಲ್ಲ. ಪೋಡಿ ಆಗಿಲ್ಲ, 944 ಸಿಸಿ ಯಡಿ ಜಾಗ ಮಂಜೂರಾಗಿಲ್ಲ ಮುಂತಾದ ಸಮಸ್ಯೆ ಬಗ್ಗೆ 38 ಅರ್ಜಿಗಳು ಬಂದವು. ಗೃಹಲಕ್ಷ್ಮಿ ಯೋಜನೆಯಡಿ 40 ಅರ್ಜಿಗಳು ಬಂದವು. ಇದೇ ಕಾರ್ಯಕ್ರಮದಲ್ಲಿ ಕೈಗಾರಿಕೆ ಇಲಾಖೆಯಿಂದ ಗಾರೆಯವರು, ಮರ ಕೆಲಸದವರು ಹಾಗೂ ಟೈಲರಿಂಗ್ ಉದ್ಯೋಗ ಮಾಡುವ ಫಲಾನುಭವಿಗಳಿಗೆ ಪರಿಕರಗಳ ಕಿಟ್‌ನ್ನು ಶಾಸಕ ರಾಜೇಗೌಡ ವಿತರಿಸಿದರು.