ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಸಂಪೂರ್ಣ ಸಹಕಾರ: ಶಾಸಕ ವಿಶ್ವಾಸ ವೈದ್ಯ

| Published : Mar 04 2025, 12:31 AM IST / Updated: Mar 04 2025, 12:32 AM IST

ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಸಂಪೂರ್ಣ ಸಹಕಾರ: ಶಾಸಕ ವಿಶ್ವಾಸ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸವದತ್ತಿ ತಾಪಂ ಸಭಾಭವನದಲ್ಲಿ ನಡೆದ ತಾಲೂಕುಮಟ್ಟದ ಪ.ಜಾತಿ ಮತ್ತು ಪ.ವರ್ಗಗಳ ಜನರ ಹಿತರಕ್ಷಣಾ ಹಾಗೂ ಯೋಗಕ್ಷೇಮ ಸಮಿತಿ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಪ.ಜಾತಿ ಮತ್ತು ಪ.ಪಂಗಡದ ಜನರ ಶ್ರೇಯೋಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಸರಕಾರದ ಮಟ್ಟದಲ್ಲಿ ಜನಾಂಗದವರಿಗೆ ದೊರಕುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತ ಕಾರ್ಯ ಮಾಡುವುದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಮಟ್ಟದ ಪ.ಜಾತಿ ಮತ್ತು ಪ.ವರ್ಗಗಳ ಜನರ ಹಿತರಕ್ಷಣಾ ಹಾಗೂ ಯೋಗಕ್ಷೇಮ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅದರಲ್ಲಿ ಪ.ಜಾತಿ ಮತ್ತು ಪ.ವರ್ಗಗಳಿಗೆ ಮೀಸಲಾದ ಅನುದಾನವನ್ನು ಸಮಾಜದ ಜನರ ಬೇಡಿಕೆಯಂತೆ ಅವರ ಗಮನಕ್ಕೆ ತಂದು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದಾಗಿ ಹೇಳಿದರು.

ಸಮಾಜದ ಮುಖಂಡ ಜಗದೀಶ ಶಿರಸಂಗಿ ಮಾತನಾಡಿ, ಕಡಬಿ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಯಲ್ಲಿ ವಾರ್ಡ್‌ನ ಮತ್ತು ಇಬ್ಬರು ಶಿಕ್ಷಕರ ವರ್ತನೆಯಿಂದ ಓರ್ವ ವಿದ್ಯಾರ್ಥಿನಿಯು ೨೭ ಮಾತ್ರೆಗಳನ್ನು ನುಂಗುವ ಮೂಲಕ ಆತ್ಮಹತ್ಯೆಗೆ ಪ್ರಯತ್ನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೂಡಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವಂತ ತೊಂದರೆಗಳು ಮತ್ತು ಅಹಿತಕರ ಘಟನೆಗಳು ನಡೆಯದಂತೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದರು.

ಬಸವರಾಜ ತಳವಾರ ಮಾತನಾಡಿ, ಡಾ.ಅಂಬೇಡ್ಕರ್‌ ಭವನದ ಸುತ್ತ ಆವರಣ ಗೋಡೆ ಇರದೆ ಇರುವುದರಿಂದ ಸಭಾಭವನದ ಸುತ್ತ ಅವ್ಯವಸ್ಥೆಯಾಗುತ್ತಿದೆ. ಇಲ್ಲಿನ ಸಮಸ್ಯೆ ಕೂಡಲೇ ಪರಿಹರಿಸಿ ಆವರಣಗೋಡೆ ನಿರ್ಮಿಸಬೇಕೆಂದರು. ಪಟ್ಟಣದಲ್ಲಿ ಎಲ್ಲ ಮಹಾತ್ಮರ ವರ್ತುಲಗಳಿದ್ದು, ಡಾ.ಅಂಬೇಡ್ಕರ್‌ ವರ್ತುಲ ಮಾಡಲು ಅವಕಾಶ ನೀಡಬೇಕೆಂದರು.

ಸಭೆಯಲ್ಲಿ ಜಿ.ಜಿ.ಚೋಪ್ರಾ ಸರಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದರಿಂದ ಕೂಡಲೇ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಲಾಯಿತು. ಬಸವೇಶ್ವರ ವರ್ತುಲದಿಂದ ಬೆಳಗಾವಿ ರಸ್ತೆಯ ಶ್ರೀ ಕುಮಾರೇಶ್ವರ ಶಾಲೆಯವರೆಗೆ ಪಾದಚಾರಿ ರಸ್ತೆ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಗಮನ ಹರಿಸಲಾಯಿತು. ಪ.ಪಂ ಮತ್ತು ಪ.ವರ್ಗಗಳ ಯೋಗಕ್ಷೇಮದ ಸಭೆಗೆ ಬೈಲಹೊಂಗಲ ಶಾಸಕರ ಅನುಪಸ್ಥಿತಿ ಕುರಿತು ಸಮಾಜ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಮುರಗೋಡದಲ್ಲಿರುವ ಡಾ.ಅಂಬೇಡ್ಕರ್‌ ಶಿಕ್ಷಣ ಸಂಸ್ಥೆಯ ಜಾಗೆಯ ಕುರಿತು ಹಲವಾರು ಸಭೆಗಳಲ್ಲಿ ಚರ್ಚೆಯಾದರೂ ಸಹಿತ ಯಾವುದೇ ತರಹದ ಸೂಕ್ತವಾದ ನಿರ್ಣಯವಾಗುತ್ತಿಲ್ಲವಾಗಿದ್ದು, ಕೂಡಲೆ ಇದಕ್ಕೆ ಅಂತಿಮ ನಿರ್ಣಯ ತೆಗೆದುಕೊಂಡು ಶಿಕ್ಷಣ ಸಂಸ್ಥೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲಾಯಿತು.

ಸವದತ್ತಿ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ, ಯರಗಟ್ಟಿ ತಹಸೀಲ್ದಾರ್‌ ಎಂ.ವಿ.ಗುಂಡಪ್ಪಗೋಳ, ತಾಪಂ ಇಒ ಆನಂದ ಬಡಕುಂದರಿ, ಮುಖ್ಯಾಧಿಕಾರಿ ಸಂಗಮೇಶ ಗದಗಿಮಠ, ಬಿಇಒ ಮೋಹನ ದಂಡಿನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್.ಕುಲಕರ್ಣಿ, ಸಿಪಿಐ ಧರ್ಮಾಕರ ಧರ್ಮಟ್ಟಿ, ಸಮಾಜದ ಮುಖಂಡರಾದ ಎಂ.ಮಲ್ಲಪ್ಪ, ರವಿ ದೊಡಮನಿ, ಬಾಬು ಕಾಳೆ, ಮಾರುತಿ ಹಿರೇಕೆಂಚಮ್ಮನವರ, ಮುದೆಪ್ಪ ಅಮಾತೆನ್ನವರ, ಮಹಾದೇವ ಬಡ್ಲಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪ್ಥಿತರಿದ್ದರು.