ವನ್ನಿಯರ್ ಸಮಾಜ ಅಭಿವೃದ್ಧಿಗೆ ಸಂಪೂರ್ಣ ಸಹಕಾರ

| Published : Mar 05 2024, 01:34 AM IST

ಸಾರಾಂಶ

ವನ್ನಿಯರ್ ಸಮಾಜ ಬಾಂಧವರು ನಂಬಿಕೆ ಹಾಗೂ ವಿಶ್ವಾಸಕ್ಕೆ ಅರ್ಹರಾಗಿದ್ದಾರೆ. ವನ್ನಿಯರ್ ಕೃಷಿಯಲ್ಲಿ ಹೆಚ್ಚು ಕಷ್ಟಪಟ್ಟು ಯಾರಿಗೂ ಕೈ ಚಾಚದೇ ಸ್ವಾಭಿಮಾನದ ಜೀವನ ನಡೆಸುತ್ತಿರುವ ಜನಾಂಗ. ಸಮಾಜದ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ ಅವರು 4.20 ಎಕರೆ ಜಮೀನು ಮಂಜೂರು ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೊಳೆಹೊನ್ನೂರಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ವನ್ನಿಯರ್ ಸಮಾಜ ಬಾಂಧವರು ನಂಬಿಕೆ ಹಾಗೂ ವಿಶ್ವಾಸಕ್ಕೆ ಅರ್ಹರಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರುನಾಡು ರಾಜ್ಯ ವನ್ನಿಯರ್ ಮಹಾಸಭಾ, ಕರುನಾಡು ರಾಜ್ಯ ವನ್ನಿಯರ್ ಮಹಿಳಾ ಮಹಾಸಭಾ, ಕರ್ನಾಟಕ ರಾಜ್ಯ ವನ್ನಿಯರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ರಾಜ್ಯ ವನ್ನಿಯಕುಲ ಕ್ಷತ್ರಿಯ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವನ್ನಿಯರ್ (ಗೌಂಡರ್) ಸಮುದಾಯದ ಸಮಾವೇಶ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವನ್ನಿಯರ್ ಕೃಷಿಯಲ್ಲಿ ಹೆಚ್ಚು ಕಷ್ಟಪಟ್ಟು ಯಾರಿಗೂ ಕೈ ಚಾಚದೇ ಸ್ವಾಭಿಮಾನದ ಜೀವನ ನಡೆಸುತ್ತಿರುವ ಜನಾಂಗ. ಸಮಾಜದ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ ಅವರು 4.20 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ₹1 ಕೋಟಿ ವೆಚ್ಚದಲ್ಲಿ 151 ಅಡಿ ಬಾಲಸುಬ್ರಹ್ಮಣ್ಯ ಮೂರ್ತಿ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶ್ರಮಿಕ ಸಮಾಜದ ಪ್ರಗತಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ರಾಜ್ಯದಲ್ಲಿ 3ಎ ಯಿಂದ 2ಎ ವರ್ಗಕ್ಕೆ ಬದಲಾಯಿಸಲು ಹಿಂದುಳಿದ ವರ್ಗಗಳ ಆಯೋಗವು ವರದಿ ನೀಡಿದೆ ಎಂದು ಹೇಳಿದರು.

ವರದಿ ಪರಿಶೀಲನೆಗೊಂಡು ಸಚಿವ ಸಂಪುಟದಲ್ಲಿ ಸಮ್ಮತಿ ಪಡೆದು ಕಾರ್ಯರೂಪಕ್ಕೆ ತರಲು ಮನವಿ ಮಾಡಲಾಗಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ವನ್ನಿಯರ್ ಸಮಾಜವರು ಮುಂದೆ ಬರಲು ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಸಂಸದನಾಗಿ ಎಲ್ಲಾ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ದೊರೆತ ಅನೇಕ ಅಭಿವೃದ್ಧಿಗೆ ಕಾರ್ಯ ಮಾಡಲಾಗಿದ್ದು ಎಲ್ಲರಿಗೂ ಕಾಣಸಿಗುತ್ತಿವೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಸಮಾಜದಲ್ಲಿ ಯಾವ ರೀತಿ ಗುರುತಿಸಿಕೊಂಡಿದ್ದಾರೆ ಎಂದು ಜನರ ಬಳಿ ಹೋಗಿ ಅಧ್ಯಯನ ನಡೆಸಲಾಗಿದೆ. ಪ್ರತಿ ಮನೆಯ 54 ವಿಷಯಗಳ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲಾಧಿಕಾರಿ, ಶಿಕ್ಷಕರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ದತ್ತಾಂಶ ಸಂಗ್ರಹಿಸಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ಸರ್ಕಾರಕ್ಕೆ ಸಂಪೂರ್ಣ ವರದಿ ಮಾಡಿದೆ. ಆ ವರದಿಯಲ್ಲಿ ಹಿಂದುಳಿದ ವರ್ಗಕ್ಕೆ ಪೂರಕವಾದ ಎಲ್ಲಾ ವರದಿ ನೀಡಿದೆ. ಈ ಬಗ್ಗೆ ಸರಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಆದರೆ ಅದಕ್ಕೆ ಬೆನ್ನು ಹತ್ತಬೇಕು. ಸಣ್ಣಪುಟ್ಟ ಸುಮಾರು 300 ಹೆಚ್ಚು ಜಾತಿಗಳು ಪಟ್ಟಿಯಲ್ಲಿ ಸೇರಿಲ್ಲ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕಿ ಶಾರದಾ ಪೂರ್ಯನಾಯ್ಕ, ಜಿಲ್ಲಾ ತಮಿಳು ಸಮಾಜದ ಅಧ್ಯಕ್ಷ ಜಿಲ್ಲಾಧ್ಯಕ್ಷ ಟಿ.ಪೆರುಮಾಳ್, ಭದ್ರಾವತಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ತಮಿಳುನಾಡಿನ ವನ್ನಿಯರ್ ಸಮುದಾಯದ ಮಹಾರಾಜರ ವಂಶಸ್ಥ ಮನ್ನಾರ ಮುನ್ನರ್ ಸೂರಪ್ಪ ಚೋಳ, ಮಹಿಳಾ ಮಹಾಸಭಾ ಅಧ್ಯಕ್ಷೆ ಆರ್.ರಮಣಿ ಮಾತನಾಡಿದರು. ಕರುನಾಡು ರಾಜ್ಯ ವನ್ನಿಯಾರ್ ಮಹಾಸಭಾ ಅಧ್ಯಕ್ಷ ಚಂದ್ರು ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಮಾಜಿ ಸದಸ್ಯ ಮಣಿಶೇಖರ್, ಎಸ್.ರಾಜು, ದೇವೇಂದ್ರ, ಆರ್.ಉಮೇಶ್, ಇ.ರಮೇಶ್ ಮುಂತಾದವರು ಹಾಜರಿದ್ದರು.

ಮಹಾಸಭಾಗಳ ಸಂಸ್ಥಾಪಕ ಜಿ.ವಿ.ಗಣೇಶಪ್ಪ ಪ್ರಾಸ್ತಾವಿಕ ಮಾತನಾಡಿದರು. ಮಂಜುಳಾ, ಮೀನಾ ಪ್ರಾರ್ಥಿಸಿ, ರೂಪಾ ಸ್ವಾಗತಿಸಿ, ಕರುನಾಡು ವನ್ನಿಯರ್ ಮಹಾಸಭಾ ಅಧ್ಯಕ್ಷ ವಿ.ಪರಶುರಾಮ್ ನಿರೂಪಿಸಿ ವಂದಿಸಿದರು.

- - - -3ಎಚ್‍ಎಚ್‍ಆರ್1:

ಹೊಳೆಹೊನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವನ್ನಿಯರ್ ಸಮುದಾಯದ ಸಮಾವೇಶವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.