ಸಾರಾಂಶ
ರಬಕವಿ-ಬನಹಟ್ಟಿ ತಾಲೂಕಿನೆಲ್ಲೆಡೆ ಮನೆಗಳಲ್ಲಿ ಕಾರ ಹುಣ್ಣಿಮೆ ನಿಮಿತ್ತ ಶುಕ್ರವಾರ ಮಣ್ಣಿನ ಎತ್ತುಗಳ ಪೂಜೆ ಸಂಭ್ರಮದಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ಬನಹಟ್ಟಿ ತಾಲೂಕಿನೆಲ್ಲೆಡೆ ಮನೆಗಳಲ್ಲಿ ಕಾರ ಹುಣ್ಣಿಮೆ ನಿಮಿತ್ತ ಶುಕ್ರವಾರ ಮಣ್ಣಿನ ಎತ್ತುಗಳ ಪೂಜೆ ಸಂಭ್ರಮದಿಂದ ನಡೆಯಿತು. ಕಾರ ಹುಣ್ಣಿಮೆ ಅಂಗವಾಗಿ ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ಮಣ್ಣಿನ ಎತ್ತುಗಳ ಮಾರಾಟ ಜೋರಾಗಿತ್ತು. ಸಮೀಪದ ಹೊಸೂರಿನ 20ಕ್ಕೂ ಅಧಿಕ ಕುಂಬಾರ ಕುಟುಂಬಗಳು ಬೆಳಗ್ಗೆ ೬ ಗಂಟೆಗೆ ಮಣ್ಣಿನ ಎತ್ತುಗಳನ್ನು ಮಾಡಲು ಆರಂಭಿಸಿ ಸಂಜೆ ೭ ಗಂಟೆಯವರೆಗೆ ಮಾರಾಟ ಮಾಡಿದರು.ರಬಕವಿ-ಬನಹಟ್ಟಿಯಲ್ಲಿ ಅಂದಾಜು 7-8 ಸಾವಿರಕ್ಕೂ ಅಧಿಕ ಜೋಡಿ ಎತ್ತುಗಳನ್ನು ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಎತ್ತುಗಳನ್ನು ತಲೆಯ ಮೇಲೆ ಇಟ್ಟುಕೊಂಡು ಮನೆ ಮನೆಗೆ ತೆರಳಿ ಮಾರಾಟ ಮಾಡಿ ಬರುತ್ತಾರೆ. ಮಣ್ಣಿನ ಎತ್ತುಗಳ ಮಾಟ ಮತ್ತು ಗಾತ್ರಾನುಸಾರ ₹ ೩೦ ರಿಂದ ₹ ೨೫೦ ರವರೆಗೆ ಎತ್ತುಗಳು ಮಾರಾಟಗೊಂಡವು.
ಹೊಸೂರ ಗ್ರಾಮದ ೯೧ ವರ್ಷದ ಚಂದ್ರವ್ವ ಕುಂಬಾರ ಏಳು ದಶಕಗಳಿಂದ ಎತ್ತುಗಳ ನಿರ್ಮಾಣ ಮಾಡುತ್ತ ಬಂದಿದ್ದಾರೆ. ತಮ್ಮ ಒಂದು ಆಣೆಕ್ಕ ಎತ್ತುಗಳನ್ನು ಮಾರಿದಾಕಿ ನಾನು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅವರ ಮನೆಯ ಸದಸ್ಯರಾದ ಯಲ್ಲವ್ವ, ಸುಜಾತಾ, ರಾಜೇಶ್ವರಿ, ಶಾಂತವ್ವ ಹಾಗೂ ಹೊಸ ತಲೆಮಾರಿನ ಮೊಮ್ಮಕ್ಕಳಾದ ರೇಣುಕಾ ಕುಂಬಾರ ಕೂಡ ಎತ್ತುಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ೬೫ ವರ್ಷದ ಈರಪ್ಪ ಕುಂಬಾರ 50, ಶಿವಪ್ಪ ಕುಂಬಾರ 35 ಮತ್ತು ಉಮೇಶ ಕುಂಬಾರ ೨೫ ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಜೆ ಎತ್ತುಗಳ ಓಟದ ಸ್ಪರ್ಧೆಯೊಂದಿಗೆ ಕರಿ ಹರಿದು ಹಬ್ಬ ಮುಕ್ತಾಯಗೊಂಡಿತು.