ಬಿಎಸ್‌ಪಿಯಲ್ಲಿ ವೈಯಕ್ತಿಕ ಲಾಭದ ಹುನ್ನಾರ: ನಾಗರಾಜ್‌

| Published : Apr 11 2024, 12:46 AM IST

ಸಾರಾಂಶ

ಬಹುಜನ ಸಮಾಜ ಪಕ್ಷದ ರಾಜ್ಯ ಸಮಿತಿಯು ಚುನಾವಣೆ ಬಂದಾಗ ಒಂದು ಗುಂಪು ಕಟ್ಟಿಕೊಂಡು ವೈಯುಕ್ತಿಕ ಲಾಭ ಪಡೆಯುವ ಹುನ್ನಾರ ಮಾಡುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಎಲ್.ನಾಗರಾಜು (ಕಮಲ್) ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಹುಜನ ಸಮಾಜ ಪಕ್ಷದ ರಾಜ್ಯ ಸಮಿತಿಯು ಚುನಾವಣೆ ಬಂದಾಗ ಒಂದು ಗುಂಪು ಕಟ್ಟಿಕೊಂಡು ವೈಯುಕ್ತಿಕ ಲಾಭ ಪಡೆಯುವ ಹುನ್ನಾರ ಮಾಡುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಎಲ್.ನಾಗರಾಜು (ಕಮಲ್) ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಎಸ್‌ಪಿ ರಾಜ್ಯ ಸಮಿತಿಯೊಳಗೆ ಅಂಬೇಡ್ಕರ್ ಚಿಂತನೆ ಹಾಗೂ ದಾದಾ ಸಾಹೇಬ್ ಕಾನ್ಸಿರಾಂ ಅವರ ತ್ಯಾಗ ಮತ್ತು ಬುದ್ದ, ಬಸವನ ಆದರ್ಶಗಳಿಲ್ಲ. ಒಂದು ಗುಂಪು ಕಟ್ಟಿಕೊಂಡು ಚುನಾವಣೆ ಬಂದಾಗ ವೈಯುಕ್ತಿಕ ಲಾಭ ಪಡೆಯುವ ಹುನ್ನಾರ ಮಾಡುತ್ತಿರುವದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಬದಲಾದ ರಾಜಕೀಯ ವ್ಯವಸ್ಥೆಯಿಂದ ರಾಜ್ಯ ಸಮಿತಿಯ ಅಂತಿಮ ಆದೇಶವಾಗಿದೆ. ಕೊಳ್ಳೇಗಾಲ ಕ್ಷೇತ್ರದಿಂದ ನಾಮಪತ್ರ ವಾಪಸ್ ಪಡೆದು ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿರುವ ಎನ್.ಮಹೇಶ್‌ರನ್ನು ಸೋಲಿಸುವ ಕಾರಣದಿಂದ ನನ್ನನ್ನು ಉದ್ದೇಶಪೂರ್ವಕವಾಗಿ ನಾಮಪತ್ರ ವಾಪಸ್ ತೆಗೆಸಿದರು. ನಂತರದ ದಿನಗಳಲ್ಲಿ ನೋಡಿದಾಗ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಇಂದಿನ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಅಶೋಕ್ ಸಿದ್ದಾರ್ಥ, ಗೋಪಿನಾಥ್ ಬೇಕಂತಲೇ ನಾಮಪತ್ರ ವಾಪಸ್ ತೆಗೆಸಿದ್ದಾರೆ ಎನ್ನುವುದು ಆಪ್ತಮೂಲದಿಂದ ತಿಳಿದುಬಂದಿದೆ ಎಂದರು.

ನಾಮಪತ್ರ ವಾಪಸ್ ಪಡೆಯಲು ಕಾರಣವೇನು ಎಂದು ರಾಜ್ಯ ಸಮಿತಿಯನ್ನು ಕೇಳಿದಾಗ ಮೇಡಂ ಅವರ ಆದೇಶ ಇತ್ತು ಎಂದು ಸಬೂಬೂ ನೀಡಿದ್ದಾರೆ. ನಾಮಪತ್ರ ವಾಪಸ್ ಪಡೆದಿದಕ್ಕೆ ನನ್ನ ಮೇಲೆ ಕಳಂಕವಿದೆ. ಇದಕ್ಕೆ ಕಾರಣ ಹೇಳಿ ಇದನ್ನು ಮಾಧ್ಯಮ ಮುಂದೆ ಹೇಳಬೇಕು ಎಂದು 10 ಬಾರಿ ಹೇಳಿದ್ದೇನೆ. ಇಲ್ಲಿಯ ತನಕ ಏನು ಮಾಡದೆ ವೈಯುಕ್ತಿಕ ಲಾಭಕ್ಕಾಗಿ ನನ್ನನ್ನು ಬಲಿಪಶು ಮಾಡಿದ್ದಾರೆ ಎಂದು ಆರೋಪಿಸಿದರು. ನನ್ನನ್ನು ಬಿಎಸ್‌ಪಿಯ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ರಾಜ್ಯ ಸಮಿತಿ ಪಕ್ಷವನ್ನು ಅಧೋಗತಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಪ್ರಾರಂಭದಲ್ಲಿದ್ದ ಚಳವಳಿ ಈಗ ಇಲ್ಲ. ನಾಮಪತ್ರದ ವ್ಯಾಪಾರ ಮಾಡುತ್ತಿದ್ದಾರೆ ಎಂದರು.

ಚಾಮರಾಜ ಲೋಕಸಭಾ ಮೀಸಲು ಕ್ಷೇತ್ರದಿಂದ ನನಗೆ ಟಿಕೆಟ್‌ ನೀಡಬಹುದಿತ್ತು ಅದನ್ನು ಹೊರಗಡೆ ಪಕ್ಷದ ರಾಜ್ಯ ಸಂಯೋಜಕ ಕೃಷ್ಣಮೂರ್ತಿಗೆ ನೀಡಿದ್ದಾರೆ. ಇದು ಈ ಕ್ಷೇತ್ರದ ಪ್ರತಿಯೊಬ್ಬ ಅಂಬೇಡ್ಕರ್ ವಾದಿಗೆ ಹಾಗೂ ಆನೆ ಗುರುತಿಗೆ ಬಿಡಲ್ಲ ಅನ್ನುವ ಮತದಾರರಿಗೆ ಪಕ್ಷದ ನಾಯಕರ ಅನಾಚಾರಗಳನ್ನು ತಿಳಿಸುವ ಉದ್ದೇಶಕ್ಕೆ ಈ ಪತ್ರಿಕಾಗೋಷ್ಠಿ ಕರೆದಿದ್ದೇನೆ ಎಂದರು.

ನಾನು ತಪ್ಪು ಮಾಡಿದರೆ ನನ್ನ ವಿರುದ್ದ ಪಕ್ಷ ಕ್ರಮ ಕೈಗೊಳ್ಳಬಹುದಿತ್ತು. ಕ್ರಿಮಿನಲ್ ಮೊಕದ್ದಮೆ ಹೂಡಬಹುದಿತ್ತು. ಜಿಪಂ ಸದಸ್ಯರಾಗಿದ್ದು, ಜಿಲ್ಲೆಯಲ್ಲಿ ನನ್ನದೆಯಾದ ಹೆಸರಿದೆ. ಬಿಎಸ್‌ಪಿಗೆ ರಾಜೀನಾಮೆ ನೀಡಿದ ಮೇಲೆ ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳು ಆಹ್ವಾನ ನೀಡಿದೆ. ನಾನು ತಟಸ್ಥನಾಗಿ ಉಳಿದಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ,ಎಸ್ಟಿ ಉದ್ದಿಮೆದಾರ ಸಂಘದ ಜಿಲ್ಲಾಧ್ಯಕ್ಷ ಶಿವಮೂರ್ತಿನಾಯಕ, ದಲಿತ ಅಭಿವೃದ್ದಿ ಸಂಘದ ಅಧ್ಯಕ್ಷ ಎಸ್ ಲಿಂಗಣ್ಣ, ಚೇತನ್‌ಕುಮಾರ್, ದುಂಡಮಾದನಾಯಕ, ಸಿದ್ದರಾಜು, ಪುಟ್ಟಸ್ವಾಮಿನಾಯಕ ಹಾಜರಿದ್ದರು. 10ಸಿಎಚ್‌ಎನ್‌57

ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಎಲ್.ನಾಗರಾಜು (ಕಮಲ್) ಮಾತನಾಡಿದರು.