ಸಂವಿಧಾನದ ಆಶಯಗಳ ಸಂಪೂರ್ಣ ಜಾರಿಗೆ ಜಾಗೃತಿ, ಅರಿವು ಅತ್ಯಗತ್ಯ

| Published : Feb 04 2025, 12:31 AM IST

ಸಾರಾಂಶ

ಚಾಮರಾಜನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ದಲಿತ ಮಹಾಸಭಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಕಾರವಾನ್ ಪತ್ರಿಕೆ ದಶಮಾನೋತ್ಸವ ಸಂಭ್ರಮ ಸಮಾರಂಭವನ್ನು ಕೊಳ್ಳೇಗಾಲ ಜೇತವನದ ಮನೋರಖಿತ ಭಂತೇಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನ ಜಾರಿಯಾಗಿ ೭೫ ವರ್ಷವಾದರೂ, ಡಾ.ಅಂಬೇಡ್ಕರ್‌ ಅವರ ಸಂವಿಧಾನ ಆಶಯಗಳು ಸಂಪೂರ್ಣ ಜಾರಿಯಾಗಿಲ್ಲ. ಇದಕ್ಕೆ ಜಾಗೃತಿ, ಅರಿವು ಅಗತ್ಯವಾಗಿದೆ ಎಂದು ಪ್ರೊ.ಪಿ. ದೇವರಾಜ್ ಹೇಳಿದರು.ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ದಲಿತ ಮಹಾಸಭಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಕಾರವಾನ್ ಪತ್ರಿಕೆ ದಶಮಾನೋತ್ಸವ ಸಂಭ್ರಮ ಸಮಾರಂಭದಲ್ಲಿ ವಿಚಾರಮಂಡನೆ ಮಾಡಿ ಮಾತನಾಡಿದರು.೭೫ ವರ್ಷ ನಮ್ಮನ್ನು ಆಳಿದ ಸರ್ಕಾರಗಳು ಸಂವಿಧಾನ ಆಶಯಗಳು ಸಂಪೂರ್ಣವಾಗಿ ಜಾರಿಯಾಗಲು ಅವಕಾಶ ಮಾಡಿಕೊಡುತ್ತಿಲ್ಲ, ಸಂವಿಧಾನ ಜಾರಿಯಾದ ನಂತರ ಮಹತ್ತರ ಬದಲಾವಣೆಯಾದರೂ ಇನ್ನು ಆರ್ಥಿಕ, ಸಾಮಾಜಿಕ ಸಮಾನತೆ ಸಾಧಿಸಲು ಸಾಧ್ಯವಾಗದೇ ದೇಶದ ಶೇ.೫೦ರಷ್ಟು ಸಂಪತ್ತು ಕೇವಲ ಶೇ.೧ರಷ್ಟು ಮಂದಿಯ ಕೈಯಲ್ಲಿದೆ ಎಂದರು.೧೨ನೇ ಶತಮಾನದ ಬಸವಣ್ಣ ಹಾಗೂ ಸಂವಿಧಾನ ಕತೃ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಾನತೆಯ ಆಶಯಗಳು ಜಾರಿಯಾಗಬೇಕಾದರೆ, ಪ್ರಸ್ತುತ ಸನ್ನಿವೇಶದಲ್ಲಿ ಜಾಗೃತಿ, ಅರಿವು ಅಗತ್ಯವಾಗಿದೆ ಇಲ್ಲದಿದ್ದರೆ, ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಹುನ್ನಾರ ನಡೆದು ಮತ್ತೆ ಹಿಂದಿನ ಪದ್ಧತಿಗಳಿಗೆ ನಮ್ಮನ್ನು ದೂಡುತ್ತಾರೆ ಎಂದರು.ಜಾತಿ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಎಲ್ಲ ಸಂಘಟನೆಗಳು ಒಂದಾಗಿ ಸಂವಿಧಾನದ ಆಶಯಗಳು ಜಾರಿಗೆ ಜಾಗೃತಿಗೊಳಿಸಬೇಕಾಗಿದೆ ಎಂದರು. ಕೊಳ್ಳೇಗಾಲ ಜೇತವನದ ಮನೋರಖಿತ ಭಂತೇಜಿ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಅಧ್ಯಕ್ಷತೆ ವಹಿಸಿದ್ದರು.

ಯರಗನಹಳ್ಳಿ ಗುರುರಾಜ್ ಪುಷ್ಪಾರ್ಚನೆ ಮಾಡಿದರು, ಮುಖ್ಯ ಅತಿಥಿಗಳಾಗಿ ಅಹಿಂದ ರಾಜ್ಯ ಉಪಾಧ್ಯಕ್ಷೆ ಕಾವೇರಿ ಶಿವಕುಮಾರ್, ಜಿಲ್ಲಾಧ್ಯಕ್ಷ ಮಹೇಶ್ ಹಳೇಪುರ ಭಾಗವಹಿಸಿದ್ದರು. ಅಂಬೇಡ್ಕರ್ ಕಾರವಾನ್ ಪತ್ರಿಕೆ ಸಂಪಾದಕ ಡಾ.ಯಮದೂರು ಸಿದ್ದರಾಜು ಪ್ರಾಸ್ತಾವಿಕ ಮಾತನಾಡಿ, ಗಡಿ ಜಿಲ್ಲೆಯಲ್ಲಿ ಪತ್ರಿಕೆಯ ದಶಮಾನೋತ್ಸವ ಸಂಭ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆ ಎನಿಸಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ಮಾಡಲಾಯಿತು.