ಅ. 23ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಅ. 27ರಂದು ಮತ ಎಣಿಕೆ ನಡೆಯಲಿದ್ದು, ಅ. 31ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸೆ. 22ರಿಂದ ಅ. 31ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಅ. 23ರಂದು ನಡೆಯಲಿದ್ದು, ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಪರಿಶೀಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅ. 15ರಂದು ಜಿಲ್ಲೆಯ ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದ ಅವರು, ಚುನಾವಣಾ ಪ್ರಕ್ರಿಯೆ, ಮಾದರಿ ನೀತಿ ಸಂಹಿತೆ ಪಾಲನೆ, ಮತದಾರರ ವಿವರ ಹಾಗೂ ಭದ್ರತಾ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.

20 ಮತಗಟ್ಟೆ, 2,714 ಮತದಾರರು: ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು 20 ಮತಗಟ್ಟೆಗಳಿದ್ದು, 2,714 ಮತದಾರರು ನೋಂದಣಿಯಾಗಿದ್ದಾರೆ. ಅವರಲ್ಲಿ 1,845 ಪುರುಷರು ಹಾಗೂ 869 ಮಹಿಳಾ ಮತದಾರರಿದ್ದಾರೆ.

13 ಅಭ್ಯರ್ಥಿಗಳು ಕಣದಲ್ಲಿದ್ದಾರೆ: ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶಿಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದಿಂದ ಸೈಬಣ್ಣ ಜಾಮದಾರ, ಜನತಾದಳ (ಯುನೈಟೆಡ್)ನಿಂದ ಶಂಕರ ರೆಡ್ಡಿ ಪಾಟೀಲ ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಕವಿರಾಜ ನಾಗಣ್ಣ ಮೋತಕಪಲ್ಲಿ, ಟಿ.ಕೆ. ದಾಸರ, ಮಹಬೂಬ್ ಮಹ್ಮದ್ ಖಾಜಾಹುಸೇನ ವಂಟೆಳ್ಳಿ, ರಾಜಕುಮಾರ ಕೆ. ಕಲಬುರಗಿ, ರಾಜು ದೇವಪ್ಪ ಸೊನ್ನ, ಶರಣು ಪಿ. ಸುಗೂರ, ಶಶಿಧರ ಬಸವರಾಜ, ಶಿವಶಂಕರ ಅಣ್ಣಪ್ಪ ತರನಳ್ಳಿ ಹಾಗೂ ಸುರೇಶ ದಾವೀದಪ್ಪ ಕಣದಲ್ಲಿದ್ದಾರೆ.

ಅ. 23ರಂದು ಮತದಾನ: ಅ. 23ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಅ. 27ರಂದು ಮತ ಎಣಿಕೆ ನಡೆಯಲಿದ್ದು, ಅ. 31ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸೆ. 22ರಿಂದ ಅ. 31ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಿಬ್ಬಂದಿಗೆ ತರಬೇತಿ: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಎಫ್‌ಎಸ್‌ಟಿ, ವಿಎಸ್‌ಟಿ, ವಿವಿಟಿ, ಸೆಕ್ಟರ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತಗಟ್ಟೆ ಅಧಿಕಾರಿಗಳು ಹಾಗೂ ಮೈಕ್ರೋ ಅಬ್ಸರ್ವರ್‌ಗಳಿಗೆ ಮೊದಲ ಹಂತದ ತರಬೇತಿ ಪೂರ್ಣಗೊಂಡಿದ್ದು, ಅ. 17ರಂದು ಎರಡನೇ ಹಂತದ ತರಬೇತಿ ನಡೆಯಲಿದೆ.

ಚುನಾವಣೆಗೆ ಸಂಬಂಧಿಸಿದ ದೂರು ಹಾಗೂ ಮಾಹಿತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, 08539–221895 ಸಂಖ್ಯೆಗೆ ಸಂಪರ್ಕಿಸಬಹುದು.

ಮದ್ಯ ಮಾರಾಟ ನಿಷೇಧ: ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅ. 21ರ ಸಂಜೆ 4ರಿಂದ ಅ. 23ರ ರಾತ್ರಿ 11ರ ವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮತಗಟ್ಟೆಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಅ. 22ರ ಬೆಳಗ್ಗೆ 10ರಿಂದ ಅ. 23ರ ರಾತ್ರಿ 11ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಅ. 23ರಂದು ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುವ ಸಂತೆ ಹಾಗೂ ಜಾತ್ರೆಗಳನ್ನು ರದ್ದುಪಡಿಸಲಾಗಿದೆ.

ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಮತದಾನಕ್ಕೆ ಸಂಬಂಧಿಸಿದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮತದಾನದ ಬಳಿಕ ಮತಪೆಟ್ಟಿಗೆಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ತಾವರಗೇರಾ ಸರ್ಕಾರಿ ಪ್ರವಾಸಿ ಮಂದಿರಕ್ಕೆ ಕೊಂಡೊಯ್ದು, ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಚುನಾವಣಾ ತಹಸೀಲ್ದಾರ್ ರವಿಕುಮಾರ ವಸ್ತ್ರದ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಕೃಷ್ಣಪ್ಪ ಎಂ. ಇಟ್ಟಂಗಿ, ಕೆ.ಎಸ್. ಮೈಲಾರಪ್ಪ, ಮಾರುತಿಗೌಡ ಪೊಲೀಸ್ ಪಾಟೀಲ, ಸೋಮನಗೌಡ ಹೊಗರನಾಳ, ಶರಣು ಶಟ್ಟರ್ ಉಪಸ್ಥಿತರಿದ್ದರು.