ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದಲ್ಲಿ ಜೂ.27ರಂದು ಆಚರಿಸುವ ನಾಡಪ್ರಭು ಕೆಂಪೇಗೌಡರ ಜಯಂತಿಗೆ ಸಂಪೂರ್ಣ ಸಹಕಾರ ನೀಡಿ ಕಾರ್ಯಕ್ರಮ ಯಶಸ್ಸುಗೊಳಿಸಲು ತಾಲೂಕು ಒಕ್ಕಲಿಗರ ಸಂಘಟನೆಗಳು ನಿರ್ಧರಿಸಿವೆ.ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ, ಒಕ್ಕಲಿಗರ ಸಂಘಟನೆಗಳ ಮುಖಂಡರು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜಾತ್ಯತೀತವಾಗಿ ಅಚರಿಸಲು ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಮುಖಂಡ ನಾಟನಹಳ್ಳಿ ಗಂಗಾಧರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಜಾತಿ ಕಟ್ಟುಪಾಡುಗಳನ್ನು ಮೀರಿ ನಾಡಿನ ಸಮಸ್ತ ಜನರ ಒಳಿತಿಗಾಗಿ ಶ್ರಮಿಸಿದವರು. ಒಕ್ಕಲಿಗ ಸಮಾಜ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಜಾತಿ, ಮತ, ಪಂಥಗಳನ್ನು ಮೀರಿ ಬದುಕುತ್ತಿದೆ ಎಂದರು.ಒಕ್ಕಲಿಗ ಸಮಾಜಕ್ಕೆ ಯಾರ ಬಗ್ಗೆಯೂ ಪೂರ್ವಾಗ್ರಹ ರಾಗ ದ್ವೇಷಗಳಿಲ್ಲ. ನಾಡಪ್ರಭು ಕೆಂಪೇಗೌಡರ ಅಶಯದಂತೆ ಸರ್ವ ಜನರ ಜೊತೆ ಒಗ್ಗೂಡಿ ಬದುಕುವುದು ನಮ್ಮ ಆಶಯ. ಅದರಂತೆ ಜೂನ್ 27ರಂದು ನಡೆಯಲಿರುವ ಕೆಂಪೇಗೌಡರ ಜಯಂತಿಯಲ್ಲಿ ತಾಲೂಕಿನ ಸರ್ವ ಸಮಾಜದ ಜನರು ಭಾಗಿಯಾಗಬೇಕು ಎಂದರು.
ತಾಲೂಕು ಆಡಳಿತ ಸೌಧದಲ್ಲಿ ನಡೆಯುವ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ ಕೆಂಪೇಗೌಡರನ್ನು ಕುರಿತು ಮಾತನಾಡಲಿದ್ದಾರೆ. ಶಾಸಕ ಎಚ್.ಟಿ.ಮಂಜು, ತಹಸೀಲ್ದಾರ್ ನಿಸರ್ಗಪ್ರಿಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಒಳಗೊಂಡು ಪ್ರಮುಖ ಬೀದಿಗಳಲ್ಲಿ ವೀರಗಸೆ, ಡೋಲು, ನಂದಿ ಕಂಭ, ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಪ್ರದರ್ಶನ ಹಾಗೂ ಮಂಗಳ ಕಳಸಗಳ ಮೂಲಕ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರು ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಜಾತ್ಯತೀತವಾಗಿ ಗುರುತಿಸಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಒಕ್ಕಲಿಗರ ಸಂಘಟನೆಗಳಿಗೆ ಸೇರಿದ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬಂಡೀಹೊಳೆ ಅಶೋಕ್, ಕಟ್ಟೆಕ್ಯಾತನಹಳ್ಳಿ ಅಂಜನಿಗೌಡ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಶೀಳನೆರೆ ಭರತ್, ಬೋರೇಗೌಡ, ಮಹಾಲಿಂಗು, ಮೂಡನಹಳ್ಳಿ ಮಂಜೇಗೌಡ, ಪುರಸಭಾ ಸದಸ್ಯೆ ಪಂಕಜ ಪ್ರಕಾಶ್, ಒಕ್ಕಲಿಗ ಮಹಿಳಾ ಸಂಘಟನೆಯ ರೇನುಕಾ ಚಂದ್ರು ಇದ್ದರು.