ಎಫ್ಐಸಿ ಯೋಜನೆ ಹೋರಾಟಕ್ಕೆ ಸಂಪೂರ್ಣ ಬೆಂಬಲ

| Published : Jul 15 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಬೂದಿಹಾಳ- ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಹತ್ತಾರು ಬಾರಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಿಗೆ ಒತ್ತಾಯ ಮಾಡಿದ್ದೇವೆ. ಈ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇನೆಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಹತ್ತಾರು ಬಾರಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಿಗೆ ಒತ್ತಾಯ ಮಾಡಿದ್ದೇವೆ. ಈ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇನೆಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.

ತಾಲೂಕಿನ ಕೊಡಗಾನೂರ ಕ್ರಾಸ್‌ನಲ್ಲಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕೊನೆ ಹಂತದ ಎಫ್.ಐ.ಸಿ ನಿರ್ಮಾಣಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಹಾಗೂ ತಾಲೂಕಿನ ೩೮ ಗ್ರಾಮಗಳ ರೈತರು ನಡೆಸಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿಯಾಗಿ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ಈ ಯೋಜನೆಯ ಡಿಪಿಆರ್ ತಯಾರಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ತಡವಾಗಿದೆ. ಇದಕ್ಕೂ ಪೂರಕವಾಗಿ ರೈತ ಸಂಘದ ನೇತೃತ್ವದಲ್ಲಿ ನಡೆಸಿರುವ ಹೋರಾಟ ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕಲು ಶಕ್ತಿ ನೀಡಿದಂತಾಗಿದೆ. ನಾನೂ ಕೂಡ ರೈತನ ಮಗನಾಗಿದ್ದು, ರೈತರ ಕಷ್ಟ ಅನುಭವಿಸಿದ ವ್ಯಕ್ತಿಯಾಗಿದ್ದೇನೆ. ನಾನು ಶಾಸಕನೆಂಬ ಅಹಂಭಾವ ನನ್ನಲ್ಲಿಲ್ಲ. ಈ ಹೋರಾಟದಲ್ಲಿ ಭಾಗಿಯಾಗಿ ನಿಮ್ಮ ಶಕ್ತಿಯೊಂದಿಗೆ ಸರ್ಕಾರದ ಮೇಲೆ ಒತ್ತಡ ಹಾಕುವಂತಹ ಕೆಲಸ ಮಾಡುತ್ತೇನೆ. ಬೂದಿಹಾಳ-ಫೀರಾಪೂರ ಯೋಜನೆ ಸಂಪೂರ್ಣ ಮುಗಿಯಬೇಕೆಂಬ ಆಲೋಚನೆ ಮಾತ್ರ ನಿಮ್ಮಲ್ಲಿರಲಿ ಎಂದು ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಮಾತನಾಡಿ, ೨೦೦೮ರಿಂದಲೂ ಬೂದಿಹಾಳ-ಫೀರಾಪೂರ ಯೋಜನೆಗಾಗಿ ಅನೇಕ ಹೋರಾಟಗಳನ್ನು ಮಾಡುತ್ತಿದ್ದೇವೆ. ಮೊದಲಿಗೆ ೮.೫೦ ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಆದರೆ ಆ ನೀರನ್ನು ಕತ್ತರಿಸಿ ಈಗ ೨.೭೦ ಟಿಎಂಸಿಗೆ ನಿಲ್ಲಿಸಿದ್ದಾರೆ. ನಮ್ಮ ಬಳಿ ಹೋರಾಟದ ಮನೋಭಾವನೆ ಎಲ್ಲಿಯವರೆಗೂ ಬರುವದಿಲ್ಲವೋ ಅಲ್ಲಿಯವರೆಗೆ ರಾಜಕಾರಣಿಗಳು ರೈತರನ್ನು ತುಳಿಯುತ್ತಾರೆ. ಈ ಯೋಜನೆಯ ಅನುಷ್ಠಾನದ ಹಿಂದೆ ಸಾಕಷ್ಟು ಕೈಗಳು ಕೆಲಸ ಮಾಡಿದ್ದು, ಅವುಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರನ್ನೂ ಸಹ ಈ ಹೋರಾಟದಲ್ಲಿ ತೊಡಗಿಸಿಕೊಳ್ಳಿ ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಈ ಯೋಜನೆಗೆ ಈಗಾಗಲೇ ₹ ೧೫೦೦ ಕೋಟಿ ಖರ್ಚು ಮಾಡಲಾಗಿದೆ. ಸದ್ಯ ಕೇವಲ ₹ ೧೭೦ ಕೋಟಿ ಕೊನೆಯ ಹಂತದ ಕಾಮಗಾರಿಗೆ ನಿಂತಿದೆ. ಯೋಜನೆ ಪೂರ್ಣಗೊಳ್ಳದಿದ್ದರೂ ಹಿಂದೆ ಖರ್ಚು ಮಾಡಿದ ಎಲ್ಲ ಹಣವೂ ನೀರಲ್ಲಿ ಹೋಮ ಮಾಡಿದಂತಾಗಲಿದೆ. ಸರ್ಕಾರ ತನ್ನ ಶ್ರೇಯಸ್ಸಿಗೆ ಬಡೆದಾಡುವದನ್ನು ಬಿಟ್ಟು ಯೋಜನೆಯನ್ನು ಮುಗಿಸಿ ರೈತರ ಬದುಕಿಗೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡರಾದ ಮಡುಸಾಹುಕಾರ ಬಿರಾದಾರ, ಎಂ.ಎಂ.ಪಾಟೀಲ, ರಾಜುಗೌಡ ಗುಂಡಕನಾಳ, ರಾಜುಗೌಡ ಕೊಳೂರ, ಡಾ.ಭಲವಂತ್ರಾಯ ನಡಹಳ್ಳಿ, ಶಿವನಗೌಡ ಅಸ್ಕಿ, ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಸುರೇಶಕುಮಾರ ಇಂಗಳಗೇರಿ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ಮಹಾದೇವ ಅಸ್ಕಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಒಳಗೊಂಡು ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ, ಗ್ರಾಮ ಒಳಗೊಂಡು ೩೮ ಗ್ರಾಮಗಳ ರೈತಾಪಿ ಜನರು ಪಾಲ್ಗೊಂಡಿದ್ದರು.