ಸಾರಾಂಶ
ಜಿಲ್ಲೆಗೆ ಹಂಚಿಕೆಯಾದ ಅನುದಾನವನ್ನು ಅಪವ್ಯಯಗೊಳಿಸದೆ ಸಂಪೂರ್ಣವಾಗಿ ಬಳಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಗೆ ಹಂಚಿಕೆಯಾದ ಅನುದಾನವನ್ನು ಅಪವ್ಯಯಗೊಳಿಸದೆ ಸಂಪೂರ್ಣವಾಗಿ ಬಳಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚಿಸಿದರು.ಜಿಪಂ ಸಭಾಂಗಣದಲ್ಲಿ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ಪಾದನೆ ಹೆಚ್ಚಿಸುವ ಕಾರ್ಯಕ್ರಮಗಳೊಂದಿಗೆ ಈಗಾಗಲೇ ರಚಿತವಾದ ರೈತ ಉತ್ಪಾದಕ ಸಂಸ್ಥೆಗಳ ಕೇಂದ್ರಿಕೃತವಾಗಿ ಅವುಗಳ ಪುನರುತ್ಥಾನ ಮಾಡುತ್ತಾ ವಿವಿಧ ಬೆಳೆಗಳು ವಿಶೇಷವಾಗಿ ಗೋವಿನಜೋಳ, ಸೋಯಾಬಿನ್, ಅರಿಶಿಣ, ಜೇನು ಬೆಳೆಯುವ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಖರೀದಿದಾರರು ಹಾಗೂ ರೈತರ ಸಭೆಗಳನ್ನು ಏರ್ಪಡಿಸಲು, ಸಂಸ್ಥೆಗಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಕಾರ್ಯೋಣ್ಮುಖರಾಗಲು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕುಗಳಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವುದನ್ನು ಬದಲಿಸಿ ಸೂಕ್ತ ಸ್ಥಳದಲ್ಲಿ ಮಾರುಕಟ್ಟೆ ಪ್ರಾಂಗಣ ಸ್ಥಾಪಿಸಲು ಕ್ರಿಯಾಯೋಜನೆ ತಯಾರಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.ಭೂತರಾಮನಹಟ್ಟಿ ಅಕ್ವೇರಿಯಂ ಪ್ರವೇಶ ದ್ವಾರವನ್ನು ಮಾರ್ಪಾಡು ಮಾಡುವುದು. ಈ ಅಕ್ವೇರಿಯಂ ಪ್ರವೇಶ ಫೀ ಕುರಿತು ಚರ್ಚಿಸಿದರು ಹಾಗೂ ಕೆ.ಎಫ್.ಡಿ.ಸಿ ಕ್ಯಾಂಟೀನ ನಿರ್ಮಿಸಲು ಜಾಗ (ನಿವೇಶನ) ಗುರುತಿಸಲು ಕೂಡಲೇ ಕ್ರಮ ವಹಿಸಹಿಸುವಂತೆ ಸೂಚಿಸಿದರು.ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ, ಮೀನುಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಜಂಟಿ ನಿರ್ದೇಶಕ ಕೃಷಿ ಶಿವನಗೌಡ ಪಾಟೀಲ, ಉಪನಿರ್ದೇಶಕ ಮಹಾಂತೇಶ ಮುರಗೋಡ ತೋಟಗಾರಿಕೆ ಇಲಾಖೆ, ಉಪ ನಿರ್ದೇಶಕ ರಾಜು ಕುಲೇರ ಪಶು ಸಂಗೋಪನಾ ಇಲಾಖೆ, ಉಪ ನಿರ್ದೇಶಕ ಸಂತೋಷ ಕೊಪ್ಪದ ಮೀನುಗಾರಿಕೆ ಇಲಾಖೆ, ಉಪ ನಿರ್ದೇಶಕ ಮಹೇಶ ಕುಮಾರ ವಾಘೆ ರೇಷ್ಮೆ ಇಲಾಖೆ,ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಉಪ ನಿರ್ದೇಶಕ ಕೃಷಿ ಮಾರುಕಟ್ಟೆ, ಲೀಡ್ ಬ್ಯಾಂಕ್ ಪ್ರತಿನಿಧಿ, ನಬಾರ್ಡ ಪ್ರತಿನಿಧಿ ಹಾಗೂ ಇತರೆ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.