ಸಾರಾಂಶ
ಮೊಳಕಾಲ್ಮುರು: ತಾಲೂಕಿಗೆ ಬಂದಿರುವ ಅನುದಾನಗಳು ಮಾರ್ಚ್ 31ರೊಳಗೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ಸರ್ಕಾರಕ್ಕೆ ವಾಪಸ್ ಹೋದಲ್ಲಿ ನೀವೇ ಹೊಣೆಗಾರಾಗುತ್ತಿರಿ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಬಿವೃದ್ಧಿ ಕಾರ್ಯಕ್ಕೆ ಬಂದಿರುವ ವಿವಿಧ ಇಲಾಖೆಯ ಅನುದಾನಗಳು ಸಂಪೂರ್ಣವಾಗಿ ಬಳಕೆಯಾಗಬೇಕು. ಸರ್ಕಾರಕ್ಕೆ ವಾಪಸ್ ಕಳಿಸಿದರೆ ನಿಮ್ಮನ್ನೇ ಹೊಣೆಗಾರರನ್ನಾಗಿಸುತ್ತೇನೆ. ಕಾಮಗಾರಿ ಪ್ರಕ್ರಿಯೆಗಳನ್ನು ಚುರುಕುಗೊಳಿಸಿ ಮಾರ್ಚ್ 31ರೊಳಗೆ ಮುಕ್ತಾಯಗೊಳಿಸಿ ಎಂದು ಸೂಚಿಸಿದರು.
ನೀರು ಸರಬರಾಜು ಇಲಾಖೆಯ ಎಇಇ ಹರ್ಷ ಮಾತನಾಡಿ, ಜಲಜೀವನ್ ಮಿಶನ್ ಯೋಜನೆಯಲ್ಲಿ 113 ಕಾಮಗಾರಿಗಳ ಪೈಕಿ 70ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದೆ. 37 ಕಾಮಗಾರಿ ಪ್ರಗತಿಯಲ್ಲಿವೆ. ಬಿ.ಜಿ.ಕೆರೆ ಬಳಿಯ ಕಾಮಗಾರಿ ಟೆಂಡರ್‌ದಾರರು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಟೆಂಡರ್ ದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುವಂತೆ ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು.
ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಿಂದಾಗಿ ಕೆರೆಗಳು ಭರ್ತಿಯಾಗಿವೆ. ನೀರು ಪೋಲಾಗದಂತೆ ಕ್ರಮ ವಹಿಸಬೇಕು. ಹಾಗೂ ದೇವಸಮುದ್ರ ಗ್ರಾಮದಲ್ಲಿ ಕೋಡಿ ನೀರಿನಿಂದ ಜನರಿಗೆ ತೊಂದರೆಯಾಗುತ್ತಿದೆ ಇದಕ್ಕೆ ಶಾಶ್ವತ ಪರಿಹಾರವೇನು ಎಂದು ಶಾಸಕರು ಪ್ರಶ್ನಿಸಿದರು.ರಾಜಕಾಲುವೆಯನ್ನು ಅಗಲೀಕರಣಗೊಳಿಸಿ, ನೀರು ಊರಿನ ಮಧ್ಯ ಭಾಗದಲ್ಲಿ ಹರಿಯುವುದನ್ನು ತಡೆಯಲು ಕ್ರಮ ವಹಿಸುತ್ತೇವೆ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಅಪ್ಪಣ್ಣ ಉತ್ತರಿಸಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ ಕಡೆ ಗಮನ ಹರಿಸಬೇಕು. ಅಡುಗೆಯವರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಲಯ ಪಾಲಕರು ಸ್ಥಳದಲ್ಲಿದ್ದು, ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ಸೂಚಿಸಿದರು.ತಾಲೂಕಿನ ಬಿ.ಜಿ.ಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಆರೋಗ್ಯ ಕೇಂದ್ರದ ಜಾಗದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿದ್ದಲ್ಲಿ ಸಿಬ್ಬಂದಿಗಳ ಕ್ವಾಟ್ರಸ್ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಟಿಎಚ್‌ಒ ಸಭೆಯಲ್ಲಿ ತಿಳಿಸಿದಾಗ, ಒಂದು ವಾರದಲ್ಲಿ ಸ್ಥಳಕ್ಕೆ ತೆರಳಿ ಅಲ್ಲಿನ ಮನೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರು, ತಹಸೀಲ್ದಾರ್ ಜಗದೀಶ್ ಹಾಗೂ ಸಿಪಿಐ ವಸಂತ್.ವಿ ಅಸೂದೆ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಜಗದೀಶ್, ತಾಪಂ ಇಒ ಹನುಮಂತಪ್ಪ, ವ್ಯವಸ್ಥಾಪಕ ನಂದೀಶ್ ಇದ್ದರು.ಮಂಚಗಳ ಹಗರಣ: ನಿಲಯ ಪಾಲಕನಅಮಾನತು ಮಾಡಲು ಸೂಚನೆಮೊಳಕಾಲ್ಮುರು: ತಾಲೂಕಿನ ಕೋನಸಾಗರ ಗ್ರಾಮದ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದ 30 ಹೊಸ ಮಂಚಗಳು ನಾಪತ್ತೆಯಾಗಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಅಲ್ಲಿನ ನಿಲಯಪಾಲಕ ಪಯಾಜ್ ಬಾಷಾ ಸಮರ್ಪಕ ಉತ್ತರ ನೀಡುತ್ತಿಲ್ಲ. ಇಲಾಖೆಯಿಂದ ತನಿಖೆ ನಡೆಯುತ್ತಿದೆ. ಮೇಲಾಧಿಕಾರಿಗಳು ಪರಿಶೀಲಿಸಿ ಕ್ರಮಕ್ಕೆ ಪತ್ರ ಬರೆದಿದ್ದಾರೆ ಎಂದು ಸಮಾಜ ಕಲ್ಯಾಣಾಧಿಕಾರಿ ನಾಸೀರ್ ಆಹಮದ್ ಸಭೆಯಲ್ಲಿ ತಿಳಿಸಿದಾಗ, ಆಶ್ಚರ್ಯ ಚಕಿತರಾದ ಶಾಸಕ ಎನ್.ವೈ.ಜಿ, ಬಡ ಮಕ್ಕಳ ನೆರವಿಗಾಗಿ ಸರ್ಕಾರ ಕಳಿಸಿದ್ದ ಮಂಚಗಳೇ ಇಲ್ಲದಂತಾದರೆ ಮೇಲಾಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿರಿ. ನಿಮಗೆ ಜವಾಬ್ದಾರಿ ಇಲ್ಲವೇ ಎಂದು ಗರಂ ಆದರು.ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಂಚಗಳ ಹಗರಣದಲ್ಲಿ ಭಾಗಿಯಾದ ನಿಯಲ ಪಾಲಕ ಪಯಾಜ್ ಬಾಷಾರನ್ನು ಇವತ್ತೇ ಅಮಾನತು ಮಾಡುವಂತೆ ತಾಕೀತು ಮಾಡಿದ ಘಟನೆಯೂ ಸಭೆಯಲ್ಲಿ ಜರುಗಿತು.