ಅನಾಥೆಯ ಬಾಳಿಗೆ ಬೆಳಕು ನೀಡಿದ ವಿನೋದ

| Published : Nov 24 2024, 01:48 AM IST

ಸಾರಾಂಶ

ರೋಣ ತಾಲೂಕಿನ ಹೊಳೆಆಲೂರು ಮೂಲದ ಬಿ.ಟೆಕ್ ಪದವೀಧರ ವಿನೋದಕುಮಾರ, ಕಳೆದ 12 ವರ್ಷಗಳಿಂದ ಆಶ್ರಯ ಪಡೆದ ಅನ್ನಪೂರ್ಣಾಗೆ ಮಂಗಳಸೂತ್ರ ಧಾರಣೆ ಮಾಡಿಸುವ ಮೂಲಕ ನವ ಜೀವನಕ್ಕೆ ಕಾಲಿಟ್ಟರು.

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾ ಸದನದಲ್ಲಿ ಶನಿವಾರ ಸೇವಾ ಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ನಡೆದ ಅನ್ನಪೂರ್ಣಾ ಹಾಗೂ ವಿನೋದಕುಮಾರರ ವಿವಾಹ ಸಮಾರಂಭವು ಸಡಗರ, ಸಂಭ್ರಮದಿಂದ ನಡೆಯಿತು. ಸರ್ವ ಸಮಾಜದ ಜನರು ಆಗಮಿಸಿ ವಧು-ವರರಿಗೆ ಆಶೀರ್ವದಿಸಿದರು.

ರೋಣ ತಾಲೂಕಿನ ಹೊಳೆಆಲೂರು ಮೂಲದ ಬಿ.ಟೆಕ್ ಪದವೀಧರ ವಿನೋದಕುಮಾರ, ಕಳೆದ 12 ವರ್ಷಗಳಿಂದ ಆಶ್ರಯ ಪಡೆದ ಅನ್ನಪೂರ್ಣಾಗೆ ಮಂಗಳಸೂತ್ರ ಧಾರಣೆ ಮಾಡಿಸುವ ಮೂಲಕ ನವ ಜೀವನಕ್ಕೆ ಕಾಲಿಟ್ಟರು. ಸೇವಾ ಭಾರತಿ ಟ್ರಸ್ಟ್ ವಿಶ್ವಸ್ಥ ಮಂಡಳಿಯ ಸದಸ್ಯ ಗದಗ ಮೂಲದ ಚನ್ನವೀರಪ್ಪ ಚನ್ನಪ್ಪನವರ ದಂಪತಿ ಕನ್ಯಾದಾನ ಮಾಡಿದರು.

ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳು ಅನ್ನಪೂರ್ಣಾಳ ವಿವಾಹವನ್ನು ಅದ್ಧೂರಿಯಾಗಿ ನಡೆಸಿಕೊಟ್ಟರು. ಈ ಹಿಂದೆ ಕೇಂದ್ರದಲ್ಲಿದ್ದು, ಮದುವೆಯಾಗಿ ಗಂಡನ ಮನೆ ಸೇರಿರುವ ಮಹಿಳೆಯರು ಕುಟುಂಬ ಸಮೇತ ಬಂದು ತಮ್ಮ ಸಹೋದರಿಯ ವಿವಾಹದಲ್ಲಿ ಭಾಗವಹಿಸಿದರು. ಸಂಸದ ಜಗದೀಶ ಶೆಟ್ಟರ, ಗೋವಿಂದ ಜೋಶಿ, ನಂದಕುಮಾರ ಸೇರಿದಂತೆ ಅನೇಕ ಗಣ್ಯರು ಮದುವೆಗೆ ಆಗಮಿಸಿ ವಧು-ವರರನ್ನು ಆಶೀರ್ವದಿಸಿ ಶುಭ ಕೋರಿದರು.

ಸೇವಾ ಭಾರತಿ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ ಶ್ರೀಧರ ನಾಡಿಗೇರ ಮಂಗಲನಿಧಿ ನೀಡಿ ಶುಭ ಕೋರಿದರು. ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದ ಸಂಸದ ಜಗದೀಶ ಶೆಟ್ಟರ ನೂತನ ದಂಪತಿಗೆ ಶುಭ ಹಾರೈಸಿದರು. ಸೇವಾ ಭಾರತಿ ಟ್ರಸ್ಟ್‌ನ ಪ್ರಾಂತ ಕಾರ್ಯದರ್ಶಿ ರಘು ಅಕಮಂಚಿ, ವಿದ್ಯಾವಿಕಾಸ ಪ್ರಕಲ್ಪದ ಅಧ್ಯಕ್ಷೆ ಭಾರತಿ ನಂದಕುಮಾರ, ಮಾತೃಛಾಯಾ ಕಲ್ಯಾಣ ಕೇಂದ್ರದ ಕಮಲಾ ಜೋಶಿ, ಕೇಂದ್ರದ ಕಾರ್ಯದರ್ಶಿ ಮಂಜುಳಾ ಕೃಷ್ಣನ್, ಸದಸ್ಯೆಯರಾದ ವೀಣಾ ಮಳಿಯೆ, ನಂದಾ ಸವಡಿ, ವೀರಣ್ಣ ಸವಡಿ, ಗೋಹಾ ನರೇಗಲ್, ನಂದಕುಮಾರ, ಸಂಕಲ್ಪ ಶೆಟ್ಟರ, ಚಂದ್ರಶೇಖರ ಗೋಕಾಕ, ಬಾಬುರಾವ ಘಂಟಸಾಲಿ, ವರನ ತಾಯಿ ಈರಮ್ಮ ಬಿಂಗಿ, ಪರಶುರಾಮ ಕೋಟೆ, ನಿಂಗಮ್ಮ ಕೋಟೆ, ಸುಭಾಸಸಿಂಗ್ ಜಮಾದಾರ, ಎ.ಸಿ. ಗೋಪಾಲ ಸೇರಿದಂತೆ ಹಲವರಿದ್ದರು.