ಬಿಬಿಎಂಪಿ ಶಾಲೆ-ಕಾಲೇಜು ಪ್ರವಾಸ, ವಾರ್ಷಿಕೋತ್ಸವಕ್ಕೆ ಹಣ ಬಿಡುಗಡೆ

| Published : Jan 21 2024, 01:33 AM IST

ಸಾರಾಂಶ

ಬಿಬಿಎಂಪಿ ಶಿಕ್ಷಣ ವಿಭಾಗ ನಿಗದಿ ಮಾಡಿರುವಂತೆ ಶೈಕ್ಷಣಿಕ ಪ್ರವಾಸಕ್ಕೆ ಪ್ರಾಥಮಿಕ ಶಾಲೆ ವಿದ್ಯಾರ್ಥಿಗೆ ತಲಾ ₹1 ಸಾವಿರ, ಪ್ರೌಢಶಾಲೆ ವಿದ್ಯಾರ್ಥಿಗೆ ತಲಾ ₹1,200, ಪಿಯು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತಲಾ ₹1,500 ಪಾವತಿಸಲಾಗಿದೆ. ಅದೇ ರೀತಿ ವಾರ್ಷಿಕೋತ್ಸವಕ್ಕೂ ತಲಾ ರು.200 ನಂತೆ ಹಣ ವರ್ಗಾಯಿಸಲಾಗಿದೆ.

*ಪ್ರಾಥಮಿಕ ಶಾಲೆ ವಿದ್ಯಾರ್ಥಿಗೆ ತಲಾ ₹1 ಸಾವಿರ

*ಪ್ರೌಢಶಾಲೆಯ ವಿದ್ಯಾರ್ಥಿಗೆ ತಲಾ ₹1,200

*ಪಿಯು, ಪದವಿ, ಪಿಜಿ ವಿದ್ಯಾರ್ಥಿಗಳಿಗೆ ತಲಾ ₹1,500

*ವಾರ್ಷಿಕೋತ್ಸವಕ್ಕೆ ಪ್ರತಿ ವಿದ್ಯಾರ್ಥಿಗೆ ₹200 ನಿಗದಿಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಶಾಲೆ-ಕಾಲೇಜುಗಳಲ್ಲಿ ವಾರ್ಷಿಕೋತ್ಸವ ಮತ್ತು ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಪಾಲಿಕೆ ಶಿಕ್ಷಣ ವಿಭಾಗ ಕೊನೆಗೂ ₹1.83 ಕೋಟಿ ಬಿಡುಗಡೆ ಮಾಡಿದ್ದು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರ ಖಾತೆಗೆ ವರ್ಗಾಯಿಸಲಾಗಿದೆ.

ಬಿಬಿಎಂಪಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಹಾಗೂ ಶಾಲೆ-ಕಾಲೇಜುಗಳಲ್ಲಿ ವಾರ್ಷಿಕೋತ್ಸವ ಆಚರಿಸಲು ಶಿಕ್ಷಣ ವಿಭಾಗ ಈವರೆಗೆ ಹಣ ಪಾವತಿಸಿರಲಿಲ್ಲ. ಕಳೆದ 10 ದಿನಗಳ ಹಿಂದಷ್ಟೇ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಹಣ ವರ್ಗಾಯಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಹಣ ವರ್ಗಾಯಿಸಲಾಗಿದೆಯೋ ಅದಕ್ಕೇ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಒಂದು ವೇಳೆ ಯಾವುದೇ ಮಗು ಪ್ರವಾಸಕ್ಕೆ ಬರದಿದ್ದರೆ ಆ ಮಗುವಿಗೆ ನಿಗದಿ ಮಾಡಿ ಪಾವತಿಸಲಾಗಿರುವ ಹಣವನ್ನು ಮುಖ್ಯ ಆಯುಕ್ತರ ಖಾತೆಗೆ ವಾಪಾಸು ಪಾವತಿಸುವಂತೆಯೂ ಸೂಚಿಸಲಾಗಿದೆ. ಬಿಬಿಎಂಪಿ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 20 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ ಸೇರಿದಂತೆ ಇನ್ನಿತರ ಚಟುವಟಿಕೆಗಾಗಿ ಈ ಹಣ ಬಿಡುಗಡೆ ಮಾಡಲಾಗಿದೆ.

ಬಿಬಿಎಂಪಿ ಶಿಕ್ಷಣ ವಿಭಾಗ ನಿಗದಿ ಮಾಡಿರುವಂತೆ ಶೈಕ್ಷಣಿಕ ಪ್ರವಾಸಕ್ಕೆ ಪ್ರಾಥಮಿಕ ಶಾಲೆ ವಿದ್ಯಾರ್ಥಿಗೆ ತಲಾ ₹1 ಸಾವಿರ, ಪ್ರೌಢಶಾಲೆ ವಿದ್ಯಾರ್ಥಿಗೆ ತಲಾ ₹1,200, ಪಿಯು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತಲಾ ₹1,500 ಪಾವತಿಸಲಾಗಿದೆ. ಅದೇ ರೀತಿ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಪ್ರತಿ ವಿದ್ಯಾರ್ಥಿಗೆ ₹200 ರಂತೆ ಲೆಕ್ಕ ಹಾಕಿ ಹಣ ವರ್ಗಾಯಿಸಲಾಗಿದೆ.