ಮೌಲಿಕ ವಿಚಾರ, ಪ್ರಾಮಾಣಿಕತೆಯಿಂದ ಉನ್ನತಿ: ಡಿಸಿ

| Published : Aug 05 2024, 12:38 AM IST

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಮೌಲಿಕ ವಿಚಾರ ಹಾಗೂ ಪ್ರಾಮಾಣಿಕ ಪ್ರಯತ್ನ ಅವಶ್ಯವೆಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಮೌಲಿಕ ವಿಚಾರ ಹಾಗೂ ಪ್ರಾಮಾಣಿಕ ಪ್ರಯತ್ನ ಅವಶ್ಯವೆಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಹೇಳಿದ್ದಾರೆ.

ಜಸ್ಟಿಸ್ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ (ರಿ) ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ‘ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲವನ್ನು ಗಮನಿಸುವ ಮಕ್ಕಳ ಮನಸ್ಸು ಪರಿಶುದ್ಧ ನೀರಿನಷ್ಟೇ ಸ್ವಚ್ಛವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ಮತ್ತು ಮನಸ್ಸನ್ನು ಸ್ವಚ್ಛವಾಗಿರಿಸಿಕೊಳ್ಳಲು ಸೂಕ್ತ ವಾತಾವರಣ ನಿರ್ಮಿಸಿಕೊಳ್ಳಬೇಕು. ಕಲುಷಿತ ವಿಚಾರಗಳಿರಬಾರದು. ದುಶ್ಚಟಕ್ಕೆ ಒಳಗಾಗಬಾರದು. ಸಮಯದ ಪ್ರಜ್ಞೆ ಹೊಂದಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ತಾವು ಉನ್ನತ ಅಧಿಕಾರಿಯಾಗಿ ಕೆಲಸಮಾಡುತ್ತಿರುವಾಗಲೇ ದಿನಾಲು ನಾಲ್ಕು ಗಂಟೆಗಳ ಕಾಲ ಓದಿ ಐ.ಎ.ಎಸ್. ಪಾಸಾಗಿರೋದನ್ನೇ ಉದಾಹರಣೆ ನೀಡುತ್ತ ತಮ್ಮ ಮನೆಯಲ್ಲಿ ಯಾರು ಸರ್ಕಾರಿ ನೌಕರರು ಇಲ್ಲ. ಸಾಧಾರಣ ಕುಟುಂಬದಿಂದ ಬಂದಿದ್ದು, ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ ಎಂದು ತಮ್ಮ ಯಶೋಗಾಥೆ ಹೇಳಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಮುದಗಲ್-ತಿಮ್ಮಾಪುರ ಕಲ್ಯಾಣ ಆಶ್ರಮದ ಮಹಾಂತ ಸ್ವಾಮಿಗಳು ಮಾತನಾಡುತ್ತ, ಜೀವನ ಎನ್ನುವದು ದೇವರು ಕೊಟ್ಟ ಸುಂದರ ಕೊಡುಗೆ ಅದನ್ನು ಸುಂದರವಾಗಿಟ್ಟುಕೊಳ್ಳಬೇಕು. ದುಶ್ಚಟ್ಟಕ್ಕೆ ಒಳಗಾಗಿ ಹಾಳು ಮಾಡಿಕೊಳ್ಳಬಾರದೆಂದು ಮಕ್ಕಳಿಗೆ ಕಿವಿಮಾತು ಹೇಳಿದರು. ವ್ಯಸನ ಮುಕ್ತ ಸಮಾಜಕ್ಕಾಗಿ ಗುರುಗಳು ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.

ಸಮಾರಂಭದಲ್ಲಿ ಎಸ್.ಎಂ. ರಡ್ಡಿ, ಬಸವ ಸಮೀತಿಯ ಅರವಿಂದ ಜತ್ತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ್, ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲರು, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಪಾಟೀಲ, ಸರ್ವಜ್ಞ ಚಿಣ್ಣರ ಲೋಕದ ನಿರ್ದೇಶಕಿ ಸಂಗೀತಾ ಪಾಟೀಲ, ಪ್ರಾಂಶುಪಾಲರಾದ ಪ್ರಶಾಂತ ಕುಲಕರ್ಣಿ, ವಿನುತಾ ಆರ್.ಬಿ., ಪ್ರಭುಗೌಡ ಸಿದ್ಧಾರೆಡ್ಡಿ, ವಿಜಯ ನಾಲವಾರ್, ಕರುಣೇಶ್ ಹಿರೇಮಠ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿದ್ದರು. ಗುರುರಾಜ ಕುಲಕರ್ಣಿ ಸ್ವಾಗತಿಸಿದರು. ತ್ರಿವೇಣಿ ಭಾವಿ ವಂದಿಸಿದರು.