ಭಕ್ತರು ಶ್ರದ್ಧಾಭಕ್ತಿಯಿಂದ ಸಲ್ಲಿಸುವ ಇಂತಹ ಸೇವೆಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜದ ಒಳಿತಿಗೂ ನೆರವಾಗಬೇಕು.

ಕಂಪ್ಲಿ: ತುಲಾಭಾರ ಸೇವೆ ಗುರುವಿನ ಮೇಲಿನ ಭಕ್ತಿ, ಗೌರವ ಹಾಗೂ ಸಮರ್ಪಣಾ ಭಾವ ವ್ಯಕ್ತಪಡಿಸುವ ಪವಿತ್ರ ಸೇವೆಯಾಗಿದೆ ಎಂದು ಚಿಕ್ಕೇನಕೊಪ್ಪ ಚನ್ನವೀರಶರಣರ ಮಠದ ಶಿವಶಾಂತವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ದೇವಸಮುದ್ರ ಗ್ರಾಮದ ಶ್ರೀತುರುಮಂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಶ್ರೀದೇವಿ ಪುರಾಣದ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಹಿರೇಮಠದ ಗುರುಶಾಂತ ತಾತನವರ ಪೌರೋಹಿತ್ಯದಲ್ಲಿ ನಡೆದ ತುಲಾಭಾರ ಸೇವೆ ಸ್ವೀಕರಿಸಿ ಮಾತನಾಡಿದರು.

ತುಲಾಭಾರ ಸೇವೆಯ ಮೂಲಕ ಸಂಗ್ರಹವಾಗುವ ಹಣ ಹುಬ್ಬಳ್ಳಿಯ ಚಿಕ್ಕೇನಕೊಪ್ಪ ಚನ್ನವೀರಶರಣರ ಮಠದ ಅಂಧ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಅವರ ಭವಿಷ್ಯದ ರೂಪಿಸುವಿಕೆಗೆ ಸದ್ಬಳಕೆ ಮಾಡಲಾಗುವುದು.

ಭಕ್ತರು ಶ್ರದ್ಧಾಭಕ್ತಿಯಿಂದ ಸಲ್ಲಿಸುವ ಇಂತಹ ಸೇವೆಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜದ ಒಳಿತಿಗೂ ನೆರವಾಗಬೇಕು. ಸೇವೆಯ ಮೂಲಕ ದೊರೆಯುವ ಹಣ ಸಮಾಜದ ಉನ್ನತಿ, ಅಸಹಾಯಕರ ನೆರವು ಹಾಗೂ ಶೈಕ್ಷಣಿಕ ಪ್ರಗತಿಯಂತಹ ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಅದಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.

ಶ್ರೀದೇವಿ ಪುರಾಣದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ಗುರುಗಳ ತುಲಾಭಾರ ಸೇವೆ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಧಾರ್ಮಿಕ ಆಚರಣೆಗಳ ಮೂಲಕ ಆಧ್ಯಾತ್ಮಿಕ ಚಿಂತನೆ ಬೆಳೆಸುವುದರ ಜತೆಗೆ ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸುವ ಸಂದೇಶವೂ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಅಳ್ಳಳ್ಳಿ ವೀರೇಶ್, ಜಿ.ಲಿಂಗನಗೌಡ, ಮಲ್ಲಿಗೌಡ, ಗಣೇಶಗೌಡ, ಜಂಬುನಾಥ, ಎಸ್.ಎಸ್. ಮಲ್ಲಿಕಾರ್ಜುನ, ವೀರನಗೌಡ, ಅಮರೇಗೌಡ, ಪುರಾಣಿಕ ಕಸಬಾದ, ಹಿರೇಮಠದ ಶಾಂತಕುಮಾರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗಾಯಕ ವಡಿಗೇರಿ ಮಹಾಂತೇಶ ಗವಾಯಿ ಗಾಯನ ಸೇವೆ ಸಲ್ಲಿಸಿದರು. ತಬಲಾ ವಾದಕ ಸಿದ್ಧಲಿಂಗೇಶ ಬಾಗೇವಾಡಿ ಸಾಥ್ ನೀಡಿದರು.