ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಅಳವಡಿಕೆಗೆ ಅನುದಾನ ಬಿಡುಗಡೆ ಆಗದೇ ವಿಳಂಬವಾಗುತ್ತಿದೆ
ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಅಳವಡಿಕೆಗೆ ಅನುದಾನ ಬಿಡುಗಡೆ ಆಗದೇ ವಿಳಂಬವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದಲ್ಲಿ ಬುಧವಾರ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ಗೇಟ್ ಬದಲಾವಣೆಗೆ ತಜ್ಞರು ಸೂಚನೆ ನೀಡಿದ್ದರು. 33 ಕ್ರಸ್ಟ್ ಗೇಟ್‌ಗಳನ್ನು ನಿರ್ಮಾಣ ಮಾಡಲು ಗುಜರಾತ ಕಂಪನಿಗೆ ವಹಿಸಲಾಗಿದೆ. ಸದ್ಯ 16 ಗೇಟ್‌ಗಳು ಶೇ. 70ರಷ್ಟು ತಯಾರಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿಯ ನಿರ್ಮಾಣ ಕಾರ್ಯ ನೋಡಿದರೆ ಈ ಬೇಸಿಗೆಯಲ್ಲಿಯೂ ಗೇಟ್‌ಗಳನ್ನು ಅಳವಡಿಸುವುದು ಕಷ್ಟ ಎಂದು ಅನಿಸುತ್ತದೆ. ಗೇಟ್‌ಗಳನ್ನು ನಿರ್ಮಾಣ ಮಾಡಲು ಸರ್ಕಾರದಲ್ಲಿ ಹಣ ಇಲ್ಲದಂತೆ ಕಾಣುತ್ತದೆ. ಕಳುಹಿಸಿದ ಪ್ರಪೋಸಲ್ ಕೂಡ ಇನ್ನೂ ಪಾಸ್ ಆಗಿಲ್ಲ ಎಂದರು.ರಾಜ್ಯ ಸರ್ಕಾರ ಖುರ್ಚಿ ಕಿತ್ತಾಟದಲ್ಲಿದೆ. ಜಲಸಂಪನ್ಮೂಲ ಇಲಾಖೆಗೆ ಹಣವೇ ಬಿಡುಗಡೆ ಮಾಡಿಲ್ಲ. ಕುರ್ಚಿ ಕದನದಲ್ಲಿ ಸಿಎಂ, ಡಿಸಿಎಂ ಇದ್ದಾರೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. 13 ಲಕ್ಷ ಎಕರೆ ಪ್ರದೇಶದ ರೈತರು ತುಂಗಭದ್ರಾ ಜಲಾಶಯ ನೆಚ್ಚಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಕೂಡಲೇ ಜಲಾಶಯಕ್ಕೆ ಭೇಟಿ ನೀಡಬೇಕು. ಕೂಡಲೇ ಗೇಟ್ ಅಳವಡಿಕೆಗೆ ವೇಗ ನೀಡಬೇಕು ಎಂದು ಒತ್ತಾಯಿಸಿದರು.
ಹೊಸಪೇಟೆಯಲ್ಲಿ ಬುಧವಾರ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಿರ್ಮಾಣ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು.