ಸಾರಾಂಶ
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ನೀರು ಮತ್ತು ವಿದ್ಯುತ್ ಕೊರತೆಯಿಂದ ರೈತರ ಬದುಕು ಬಿದಿಗೆ ಬಿದ್ದಿದೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಸರ್ಕಾರ ವಿವಿಧ ಯೋಜನೆಯ ಹಣವನ್ನು ಬ್ಯಾಂಕುಗಳು ರೈತರ ಖಾತೆಗೆ ಜಮೆ ಮಾಡದೆ ಮುಟ್ಟುಗೋಲು ಹಾಕಿಕೊಂಡು ಅವರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬರುತ್ತಿರುವ ವಿವಿಧ ಯೋಜನೆಗಳ ಹಣವನ್ನು ಬ್ಯಾಂಕ್‌ಗಳು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.ಪಟ್ಟಣದ ರೈತಸಂಘದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಬ್ಯಾಂಕ್‌ಗಳ ರೈತ ವಿರೋಧಿ ನೀತಿ ಖಂಡಿಸಿದರು.
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ನೀರು ಮತ್ತು ವಿದ್ಯುತ್ ಕೊರತೆಯಿಂದ ರೈತರ ಬದುಕು ಬಿದಿಗೆ ಬಿದ್ದಿದೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಸರ್ಕಾರ ವಿವಿಧ ಯೋಜನೆಯ ಹಣವನ್ನು ಬ್ಯಾಂಕುಗಳು ರೈತರ ಖಾತೆಗೆ ಜಮೆ ಮಾಡದೆ ಮುಟ್ಟುಗೋಲು ಹಾಕಿಕೊಂಡು ಅವರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವೃದ್ದಾಪ್ಯ ವೇತನ, ವಿಧವಾ ವೇತನ, ಕಿಸಾನ್ ಯೋಜನೆ, ನರೇಗಾ ಕೂಲಿ, ಹಾಲಿನ ಸಹಾಯ ಧನ, ಭಾಗ್ಯಲಕ್ಷ್ಮಿ ಯೋಜನೆಯ ಹಣ ಸೇರಿದಂತೆ ವಿವಿಧ ಸಹಾಯ ಧನ ಯೋಜನೆಗಳು ರೈತರ ಬದುಕಿಗೆ ಗುಟುಕು ಆಸರೆಯಾಗಿವೆ. ಬ್ಯಾಂಕುಗಳು ಸರ್ಕಾರದ ಯಾವುದೇ ಯೋಜನೆಗಳ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳದೆ ಫಲಾನುಭವಿಗಳ ಖಾತೆಗೆ ಕಡ್ಡಾಯವಾಗಿ ಜಮೆ ಮಾಡುವಂತೆ ಆರ್.ಬಿ.ಐ ನಿರ್ದೇಶನವಿದ್ದರೂ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕುಗಳು ಆರ್.ಬಿ.ಐ ಆದೇಶವನ್ನು ಪಾಲಿಸದೆ ಆರ್.ಬಿ.ಐ ಗೆ ಸೆಡ್ಡು ಹೊಡೆದು ನಿಂತಿವೆ ಎಂದು ದೂರಿದರು.ರೈತರ ಹಿತ ದೃಷ್ಠಿಯಿಂದ ತಕ್ಷಣವೇ ತಾಲೂಕಿನ ತಹಸೀಲ್ದಾರರು ಮತ್ತು ತಾಪಂ ಇಒ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ಕರೆದು ಮುಟ್ಟುಗೋಲು ಹಾಕಿಕೊಂಡಿರುವ ಫಲಾನುಭವಿಗಳ ಹಣವನ್ನು ವಾಪಸ್ ಕೊಡಿಸುವಂತೆ ಒತ್ತಾಯಿಸಿದರು.
ರಾಜಕೀಯ ಪಕ್ಷಗಳು ರೈತರ ಹಿತವನ್ನು ರಕ್ಷಿಸುವಲ್ಲಿ ವಿಫಲವಾಗಿವೆ. ಸರ್ಕಾರದ ಯೋಜನೆಗಳ ಹಣವನ್ನೇ ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ಯೋಜನೆಗಳ ಲಾಭವನ್ನೆ ಜನರಿಂದ ಕಿತ್ತುಕೊಳ್ಳುತ್ತಿದ್ದರೂ ಆಳುವ ಸರ್ಕಾರಗಳಾಗಲೀ ಅಥವಾ ವಿಪಕ್ಷಗಳಾಗಲೀ ಜನರ ನೆರವಿಗೆ ನಿಲ್ಲುತ್ತಿಲ್ಲ ಎಂದು ಕಿಡಿಕಾರಿದರು.