ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮಕ್ಕೆ ಹೆದ್ದಾರಿ ಗಡಿಯಿಂದ ತೆರಳುವ ರಸ್ತೆಯ ಅಭಿವೃದ್ಧಿಗೆ ೬ ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.ಬೇಲೂರಿನಲ್ಲಿ ತಾಲೂಕು ಆಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದಿಂದ ಜ್ಯೋತಿ ಬೀಳ್ಕೊಡುವ ಕಾರ್ಯಕ್ರಮ ಹಾಗೂ ಶಾಸನ ಪ್ರತಿಕೃತಿಮಂಟಪ ಬಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ೮ ಜ್ಞಾನ ಪೀಠ ಪ್ರಶಸ್ತಿ ಪಡೆದಿರುವ ನಾವು ಕನ್ನಡ ಭಾಷೆಯ ಪ್ರಥಮ ಶಿಲಾ ಶಾಸನ ನೀಡಿದಂತ ತಾಲೂಕಿನಲ್ಲಿ ಇರುವುದು ವಿಶೇಷ. ಇಂತಹ ಗ್ರಾಮವನ್ನು ಅಭಿವೃದ್ಧಿ ಪಡಿಸುವುದು ನಮ್ಮ ಕರ್ತವ್ಯವಾಗಿದೆ. ಹಲ್ಮಿಡಿ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕಿದ್ದು ಈ ಗ್ರಾಮದ ಸುತ್ತಲಿನ ಹಲವು ಗ್ರಾಮಗಳ ಅಭಿವೃದ್ಧಿಯೂ ಆಗಬೇಕಿದೆ. ಇದಕ್ಕೆ ಪೂರಕವಾಗಿ ಇದೀಗ ಲೋಕೋಪಯೋಗಿ ಸಚಿವರ ಒತ್ತಾಸೆಯಿಂದ ರಸ್ತೆ ಅಭಿವೃದ್ಧಿಗೆ ೬ ಕೋಟಿ ರು. ನೀಡಿದ್ದು ೧ ವಾರದಲ್ಲಿ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಮಮತಾ, ಸಂಶೋಧಕ ಡಾ.ಶ್ರೀವತ್ಸ ಎಸ್.ವಟಿ, ಕಸಾಪ ತಾ.ಅಧ್ಯಕ್ಷ ಮಾ.ನ.ಮಂಜೇಗೌಡ, ಮಾಜಿ ಅಧ್ಯಕ್ಷ ಅನಂತರಾಜೇಅರಸು, ತಾ.ಪಂ.ಇಒ ವಸಂತಕುಮಾರ್, ಕರವೇ ನಾರಾಯಣಗೌಡ ಬಣದ ತಾ.ಅಧ್ಯಕ್ಷ ಚಂದ್ರಶೇಖರ್, ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ, ಟ್ರಸ್ಟ್ ಅಧ್ಯಕ್ಷ ಗೋವಿಂದೇಗೌಡರು, ಹೋಬಳಿ ಕಸಾಪ ಅಧ್ಯಕ್ಷ ಚನ್ನೇಗೌಡ ಪ್ರಮುಖರಾದ ಎಚ್.ಟಿ.ಮಂಜೇಗೌಡ, ಹೆಚ್.ಟಿ.ಗುರುಸಿದ್ದೇಗೌಡ, ಎಚ್.ಎಂ.ಮಂಜೇಗೌಡ, ಪಿಡಿಒ ಶಿವಣ್ಣ, ಮು.ಶಿ.ಅನುಸೂಯ, ಗುರುಸಿದ್ದಪ್ಪ, ವಿದ್ಯಾರ್ಥಿಗಳು ಇದ್ದರು.ಕಾರ್ಯಕ್ರಮದ ನಂತರ ಕನ್ನಡ ಜ್ಯೋತಿಯನ್ನು ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ಕರವೇ ಅಧ್ಯಕ್ಷ ಚಂದ್ರಶೇಖರ್, ಮಾಜಿ ಕಸಾಪ ಅಧ್ಯಕ್ಷ ಅನಂತರಾಜೇಅರಸು ಹಾಗೂ ಹತ್ತಾರು ಕರವೇ ಕಾರ್ಯಕರ್ತರೊಂದಿಗೆ ಬೇಲೂರಿಗೆ ತರಲಾಯಿತು.