ಬೇಡಿಕೆಗೆ ಅನುಸಾರ ಅನುದಾನ ಬಳಕೆ

| Published : Jan 05 2025, 01:33 AM IST

ಸಾರಾಂಶ

ತಾಲೂಕಿನಲ್ಲಿ ವಸತಿ ನಿಲಯಗಳ ಬೇಡಿಕೆ ಸಾಕಷ್ಟಿದೆ. ಡಾ. ಬಿ.ಆರ್.ಅಂಬೇಡ್ಕರ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯಕ್ಕಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

ನರಗುಂದ: ಬಸವರಾಜ ಬೊಮ್ಮಾಯಿ ಅಧಿಕಾರವಧಿಯಲ್ಲಿ ₹ 6.79 ಕೋಟಿ ಅನುದಾನದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಬಾಲಕರ ವಸತಿ ನಿಲಯ ಕಟ್ಟಡದ ಭೂಮಿ ಪೂಜೆ ನೆರವೇರಿಸಲಾಯಿತು. ಈಗ ₹ 4 ಕೋಟಿ ವೆಚ್ಚದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣಗೊಂಡಿದೆ.ಉಳಿದ ಅನುದಾನ ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರ ಬಳಕೆ ಮಾಡಲಾಗುವುದು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ, ಜಿಪಂ, ತಾಲೂಕಾಡಳಿತ, ತಾಪಂ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ವಸತಿ ನಿಲಯಗಳ ಬೇಡಿಕೆ ಸಾಕಷ್ಟಿದೆ. ಡಾ. ಬಿ.ಆರ್.ಅಂಬೇಡ್ಕರ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯಕ್ಕಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಗಿದೆ. ಗ್ರಾಮೀಣ ಭಾಗದಲ್ಲಿ ಅಸ್ಪ್ರಶ್ಯತೆ ಇನ್ನು ಇದೆ. ಅಸ್ಪ್ರಶ್ಯತೆ ತೊಲಗಲು ಕೇವಲ ಹೋರಾಟ ಮಾಡಿದರೆ ಸಾಲದು ಎಲ್ಲರೂ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ನಿಮಗಾಗಿ ಸರ್ಕಾರದ ಸೌಲಭ್ಯ, ಯೋಜನೆಗಳಿವೆ, ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ವಸಂತ ಜೋಗಣ್ಣವರ ಮಾತನಾಡಿ, ವಿದ್ಯೆಯೇ ನಮ್ಮ ಶಕ್ತಿಯಾಗಿದೆ. ಮೊದಲು ಶಿಕ್ಷಣ ಆ ಮೇಲೆ ಹೋರಾಟ. ಸರ್ಕಾರದ ಅನುಕೂಲತೆ ಸದುಪಯೋಗ ಮಾಡಿಕೊಳ್ಳದಿರುವುದು ದುಃಖಕರ ಸಂಗತಿಯಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಂಪೌಂಡ, ಗೇಟ್, ಸೆಕ್ಯುರಿಟಿ ಗಾರ್ಡ್‌ ಅವಶ್ಯಕತೆ ಇದೆ ಎಂದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಸಂವಿಧಾನದಲ್ಲಿ ಸರ್ವರಿಗೂ ಸಮಬಾಳು, ಸಮಪಾಲು ನೀಡಲಾಗಿದೆ. ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ ರಕ್ಷಣೆಗೆ ಅಂಬೇಡ್ಕರ್ ಬದ್ಧತೆ ಒದಗಿಸಿದ್ದಾರೆ. ನಾವು ಮಾಡುತ್ತಿರುವ ಪ್ಯಾಷನ್ ಸಂಸ್ಕೃತಿಗೆ ಧಕ್ಕೆ ತರದಿರಲಿ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತದಾರ,ತಹಸೀಲ್ದಾರ ಶ್ರೀಶೈಲ ತಳವಾರ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಸಿ.ಕೆ. ಪಾಟೀಲ, ದೇವಣ್ಣ ಕಲಾಲ, ಭಾವನಾ ಪಾಟೀಲ, ಪ್ರಶಾಂತ ಜೋಶಿ, ಸುನೀಲ ಕುಷ್ಟಗಿ, ಚಂಬಣ್ಣ ವಾಳದ, ಬಾಪುಗೌಡ ತಿಮ್ಮನಗೌಡ್ರ, ಬಿ.ಎಂ. ಬಡಿಗೇರ, ಕ್ರೈಸ್ ಎಇಇ ಚಂದ್ರಶೇಖರ, ಚಂದ್ರು ದಂಡಿನ, ಮಲ್ಲಪ್ಪ ಮೇಟಿ, ಶರಣು ಪೂಜಾರ, ಭೀಮಣ್ಣವರ ಸೇರಿದಂತೆ ಮುಂತಾದವರು ಇದ್ದರು.