ರಸ್ತೆಯಿಲ್ಲದೇ ದೋಣಿಯಲ್ಲಿ ಶವ ಸಾಗಿಸಿ ಅಂತ್ಯಸಂಸ್ಕಾರ!

| Published : Oct 11 2024, 11:53 PM IST

ರಸ್ತೆಯಿಲ್ಲದೇ ದೋಣಿಯಲ್ಲಿ ಶವ ಸಾಗಿಸಿ ಅಂತ್ಯಸಂಸ್ಕಾರ!
Share this Article
  • FB
  • TW
  • Linkdin
  • Email

ಸಾರಾಂಶ

ಉಂಬ್ಳೆಜೂಗ- ಸಿದ್ದರ ಸಂಪರ್ಕಿಸಲು ಸೇತುವೆ ಕೂಡಾ ನಿರ್ಮಾಣ ಮಾಡಲಾಗಿದೆ. ಆದರೆ ಸೇತುವೆ ಏರಲು ರಸ್ತೆ ಇಲ್ಲದ ಕಾರಣ ಸೇತುವೆ ಪ್ರಯೋಜನಕ್ಕೆ ಬಾರದಂತಾಗಿದೆ.

ಕಾರವಾರ: ಕಾಳಿ ನದಿಯಿಂದ ಸುತ್ತುವರಿದಿರುವ ತಾಲೂಕಿನ ಉಂಬ್ಳೆಜೂಗಕ್ಕೆ ಸೇತುವೆ ನಿರ್ಮಾಣವಾಗಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದ್ದು, ಹೀಗಾಗಿ ಗ್ರಾಮಸ್ಥರು ಶವಸಂಸ್ಕಾರಕ್ಕೂ ಪರದಾಡುವಂತಾಗಿದೆ. ಗುರುವಾರ ದೋಣಿಯಲ್ಲಿ ಶವ ಒಯ್ದು ಅಂತ್ಯಸಂಸ್ಕಾರ ಮಾಡಿದ್ದಾರೆ.ಗುರುವಾರ ಗುಲ್ಬಾ ಕೋಳಮಕರ್ (೮೩) ಎಂಬವರು ಮೃತಪಟ್ಟಿದ್ದು, ಊರಿನಲ್ಲಿ ಸ್ಮಶಾನ ಇಲ್ಲದ ಕಾರಣ ಕಾಳಿ ನದಿಯನ್ನು ದಾಟಿ ಪಕ್ಕದ ಸಿದ್ದರ ಊರಿಗೆ ಬಂದು ಅಲ್ಲಿನ ಅರಣ್ಯ ಪ್ರದೇಶದಲ್ಲಿ ಶವಸಂಸ್ಕಾರ ಮಾಡಬೇಕು. ಈಗಾಗಲೇ ಉಂಬ್ಳೆಜೂಗ- ಸಿದ್ದರ ಸಂಪರ್ಕಿಸಲು ಸೇತುವೆ ಕೂಡಾ ನಿರ್ಮಾಣ ಮಾಡಲಾಗಿದೆ. ಆದರೆ ಸೇತುವೆ ಏರಲು ರಸ್ತೆ ಇಲ್ಲದ ಕಾರಣ ಸೇತುವೆ ಪ್ರಯೋಜನಕ್ಕೆ ಬಾರದಂತಾಗಿದೆ. ಇದರಿಂದಾಗಿ ದಿನನಿತ್ಯದ ಕೆಲಸ ಕಾರ್ಯಗಳಿಗೆ, ಶವಸಂಸ್ಕಾರಕ್ಕೆ ಇತ್ಯಾದಿ ಕೆಲಸಕ್ಕೆ ದೋಣಿಯನ್ನೇ ಅವಲಂಬಿಸುವಂತಾಗಿದೆ.ಗುರುವಾರ ಮೃತಪಟ್ಟಿದ್ದ ಗುಲ್ಬಾ ಅವರ ಶವವನ್ನು ಎರಡು ದೋಣಿ ಸೇರಿಸಿ ಕಟ್ಟಿ ನದಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿದ್ದಾರೆ. ಸೇತುವೆಗೆ ಎರಡೂ ತುದಿಗಳಲ್ಲಿ ಮಣ್ಣು ಹಾಕಿ ರಸ್ತೆ ಮಾಡಿದ್ದರೆ ಸೇತುವೆಯನ್ನು ಬಳಕೆ ಮಾಡಲು ಅವಕಾಶ ಸಿಗುತ್ತಿತ್ತು. ಸೇತುವೆಯನ್ನು ಲೋಕೋಪಯೋಗಿ ಇಲಾಖೆ ಕಟ್ಟಿದ್ದು, ಒಂದು ಭಾಗ ಖಾಸಗಿ ಜಮೀನಿಗೆ ತಾಗಿಕೊಂಡಿದೆ. ನಿರ್ಮಾಣಕ್ಕೂ ಪೂರ್ವ ಸಂಬಂಧಿಸಿದ ಅಧಿಕಾರಿಗಳು ಖಾಸಗಿ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸದೇ ಇರುವ ಕಾರಣ ಬಳಕೆಗೆ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಮದಿಂದಾಗಿ ಉಂಬ್ಳೆಜೂಗದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಶೀಘ್ರ ಇತ್ಯರ್ಥ: ಉಂಬ್ಳೆಜೂಗ ಸೇತುವೆಯ ಒಂದು ಭಾಗದಲ್ಲಿ ಖಾಸಗಿ ವ್ಯಕ್ತಿ ಜಮೀನು ಇದೆ. ಹೀಗಾಗಿ ಬಳಕೆಗೆ ಆಗುತ್ತಿಲ್ಲ. ಜಾಗದ ಮಾಲೀಕರೊಂದಿಗೆ ಮಾತುಕತೆ ಮಾಡಲಾಗುತ್ತಿದೆ. ಜನರಿಗೆ ತೊಂದರೆ ಆಗದಂತೆ, ಬಳಕೆಗೆ ಸಿಗುವಂತೆ ಶೀಘ್ರದಲ್ಲಿ ಮಾಡಿಕೊಡುತ್ತೇವೆ ಎಂದು ತಹಸೀಲ್ದಾರ್ ನಿಶ್ಚಲ್ ನರೋನ್ಹ ತಿಳಿಸಿದರು. ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವು

ಶಿರಸಿ: ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗೋಳಿಯಲ್ಲಿ ನಡೆದಿದೆ.ಕುಮಟಾದ ಕಡ್ಲೆಯ ಹಾಲಿ ತಾಲೂಕಿನ ಗೋಳಿ ನಿವಾಸಿ ವಿಜಯ ಮಹಾದೇವ ಆಚಾರಿ (೫೬) ಮೃತಪಟ್ಟ ವ್ಯಕ್ತಿ.ಇವರು ಒಂದು ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅ. ೬ರಂದು ಗೋಳಿ ಊರಿನ ಶ್ರೀಧರ ಶಿವರಾಮ ಹೆಗಡೆ ಮನೆಗೆ ಆಚಾರಿ ಕೆಲಸಕ್ಕೆ ಹೋಗಿದ್ದು, ಸಂಜೆ ೪.೩೦ ಗಂಟೆಗೆ ಕೆಲಸ ಮಾಡುತ್ತಿರುವ ವೇಳೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಅಮ್ಮಿನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ. ೯ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಾರೆ.