ಸಾರಾಂಶ
ಹಾನಗಲ್ಲ: ಸಕಲ ಸರಕಾರಿ ಗೌರವಗಳೊಂದಿಗೆ ವಿಧಾನಸಭೆ ಮಾಜಿ ಉಪಸಭಾಧ್ಯಕ್ಷ ಮನೋಹರ ತಹಶೀಲ್ದಾರ ಅವರ ಅಂತ್ಯಕ್ರಿಯೆ ನಡೆಸಲಾಯಿತು.ಶುಕ್ರವಾರ ಹಾನಗಲ್ಲ ತಾಲೂಕಿನ ಅಕ್ಕಿವಳ್ಳಿಯ ಮನೋಹರ ತಹಶೀಲ್ದಾರ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಂತಿಮ ಗೌರವ ಸಲ್ಲಿಸಿದ ನಂತರ ಅಂತ್ಯ ಸಂಸ್ಕಾರ ನಡೆಯಿತು. ಅವರ ಹುಟ್ಟೂರು ಅಕ್ಕಿವಳ್ಳಿಯಲ್ಲಿ ಪ್ರತಿ ಮನೆಗಳ ಸಾರ್ವಜನಿಕರು ಗೌರವ ಸಲ್ಲಿಸಿ ಕಂಬನಿ ಮಿಡಿದರು. ಬೆಳಗ್ಗೆ ಶಾಸಕ ಶ್ರೀನಿವಾಸ ಮಾನೆ ಕಾರ್ಯಕರ್ತರೊಂದಿಗೆ ಅಕ್ಕಿವಳ್ಳಿಗೆ ಆಗಮಿಸಿ ಅಂತ್ಯ ಸಂಸ್ಕಾರ ಸ್ಥಳದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸುವ ವ್ಯವಸ್ಥೆಯನ್ನು ಪರಿಶೀಲಿಸಿದರು. ತಾಲೂಕು ತಹಶೀಲ್ದಾರ ಎಸ್. ರೇಣುಕಮ್ಮ ಸ್ಥಳದಲ್ಲಿದ್ದು, ಎಲ್ಲ ವ್ಯವಸ್ಥೆಗಳನ್ನು ನೋಡಿಕೊಂಡರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ವಿಷ್ಣುಕಾಂತ ಜಾಧವ ಸೇರಿದಂತೆ ಹಲವು ಗಣ್ಯರು ಮನೋಹರ ತಹಶೀಲ್ದಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಡಿವೈಎಸ್‌ಪಿ ಗುರುಶಾಂತಪ್ಪ, ತಹಶೀಲ್ದಾರ ಎಸ್ ರೇಣುಕಮ್ಮ ಸೇರಿದಂತೆ ಅಧಿಕಾರಿಗಳು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಮೃತರ ಗೌರವಾರ್ಥ ಪೊಲೀಸ್ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮನೋಹರ ತಹಶೀಲ್ದಾರ್ ಅವರ ಸುಪುತ್ರ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಸ್ತಾಂತರಿಸಿದರು.