ಸೇನಾ ವಾಹನ ಅಪಘಾತ : ಸಕಲ ಸರ್ಕಾರಿ ಗೌರವದೊಂದಿಗೆ ಬೆಳಗಾವಿ ಇಬ್ಬರು ಯೋಧರ ಅಂತ್ಯಕ್ರಿಯೆ

| Published : Dec 27 2024, 02:17 AM IST / Updated: Dec 27 2024, 10:00 AM IST

ಸಾರಾಂಶ

ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಬೆಳಗಾವಿ ಜಿಲ್ಲೆಯ ಇಬ್ಬರು ಯೋಧರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮಗಳಲ್ಲಿ ನೆರವೇರಿಸಲಾಯಿತು.

 ಚಿಕ್ಕೋಡಿ : ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಬೆಳಗಾವಿ ಜಿಲ್ಲೆಯ ಇಬ್ಬರು ಯೋಧರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮಗಳಲ್ಲಿ ನೆರವೇರಿಸಲಾಯಿತು.

ಡಿ.23ರಂದು ಮಣಿಪುರದ ಬಂಬಲಾ ಗ್ರಾಮದ ಬಳಿ ಕರ್ತವ್ಯ ಮುಗಿಸಿ ವಾಪಸ್ ಬರುವಾಗ ಕಣಿವೆ ಪ್ರದೇಶದಲ್ಲಿ ಸೇನಾ ವಾಹನ ಉರುಳಿಬಿದ್ದು ಹುತಾತ್ಮರಾದ ಚಿಕ್ಕೋಡಿ ತಾಲೂಕಿನ ಕುಪ್ಪಾಣವಾಡಿ ಗ್ರಾಮದ ಸುಬೇದಾರ್‌ ಪಾರ್ಥಿವ ಶರೀರ ಮಣಿಪುರದಿಂದ ವಿಶೇಷ ವಿಮಾನದ ಮೂಲಕ ಗೋವಾಕ್ಕೆ ಬಂದು, ಅಲ್ಲಿಂದ ಬೆಳಗಾವಿ ಮರಾಠ ಲೈಟ್‌ ಇನ್‌ಫಂಟ್ರಿಗೆ ಆಗಮಿಸಿ ಅಲ್ಲಿಂದ ಸೇನಾ ವಾಹನದಲ್ಲಿ ನೇರವಾಗಿ ಕುಪ್ಪಣವಾಡಿಗೆ ತರಲಾಯಿತು. ಗ್ರಾಮಸ್ಥರು ಮತ್ತು ಮಾಜಿ ಸೈನಿಕರು ಸೇರಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಧರ್ಮರಾಜ ಅಮರಹೇ ಎಂದು ಘೋಷಣೆ ಮೊಳಗಿಸಿದರು. 

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವೀರಯೋಧನಿಗೆ ತಂದೆ ಸುಭಾಷ, ತಾಯಿ ಶಕುಂತಲಾ, ಪತ್ನಿ ಶ್ರದ್ಧಾ ಮತ್ತು ಇಬ್ಬರು ಪುತ್ರರು ಪಾರ್ಥಿವ ಶರೀರ ನೋಡಿ ರೋಧಿಸಿದರು. ಅಂತಿಮಯಾತ್ರೆಯ ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಮುಂತಾದವರು ವೀರಯೋಧನಿಗೆ ನಮನ ಸಲ್ಲಿಸಿದರು.

ಯೋಧ ದಯಾನಂದ ತಿರಕನ್ನವರ ಅಂತ್ಯಕ್ರಿಯೆ

ಜಮ್ಮು-ಕಾಶ್ಮೀರದಲ್ಲಿ ಸೇನಾ ಬಸ್ ೩೦೦ ಅಡಿ ಆಳದ ಕಮರಿಗೆ ಬಿದ್ದು ಸಂಭಿವಿಸಿದ ದುರಂತದಲ್ಲಿ ಹುತಾತ್ಮರಾದ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಯೋಧ ಸುಭೇದಾರ್‌ ದಯಾನಂದ ತಿರಕನ್ನವರ (45 ) ಅವರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಯೋಧನ ಪಾರ್ಥಿವ ಶರೀರ ಬೆಳಗಾವಿಯಿಂದ ಸೇನಾ ವಾಹನದಲ್ಲಿ ಮಧ್ಯಾಹ್ನ ಸ್ವಗ್ರಾಮಕ್ಕೆ ಆಗಮಿಸಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣೆಗೆಯಲ್ಲಿ ಗ್ರಾಮದ ಯುವಕರು, ಹಿರಿಯರು ಅಮರ ರಹೇ, ಭಾರತ ಮಾತಾ ಕಿ ಜೈ ಎಂಬ ಘೋಷಣೆ ಮೊಳಗಿಸಿದರು. ಪಾರ್ಥೀವ ಶರೀರ ಮನೆಗೆ ಬಂದೊಡನೆ ತಾಯಿ, ಪತ್ನಿ, ಮಗ, ಸಹೋದರ ಹಾಗೂ ಪಾಟೀಲ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿತ್ತು. ಮಾರಿಹಾಳ ಠಾಣೆ ಪೊಲೀಸ್‌ ಅಧಿಕಾರಿ ಮತ್ತು ಜನರು ಯೋಧನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸೈನಿಕರು ಗಾಳಿಯಲ್ಲಿ ೩ ಸುತ್ತು ಗುಂಡು ಹಾರಿಸಿ ರಾಷ್ಟ್ರಗೀತೆ ನುಡಿಸಿ ಗೌರವ ನಮನ ಸಲ್ಲಿಸಿದರು.