ಹಾನಗಲ್ಲ: ಉಪ್ಪುಣಸಿಯಲ್ಲಿ ವೀರಯೋಧ ಯಶೋಧರ ವಡ್ಡರ ಅವರ ಪಾರ್ಥಿವ ಶರೀರಕ್ಕೆ ತಾಲೂಕು ಆಡಳಿತ, ಶಾಸಕರು, ಮುಖಂಡರು ಗೌರವ ನಮನ ಸಲ್ಲಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶನಿವಾರ ಬೆಳಗ್ಗೆ ಕೊಚ್ಚಿಯಿಂದ ತಾಲೂಕಿನ ಉಪ್ಪುಣಸಿಗೆ ಆಗಮಿಸಿದ ಪಾರ್ಥಿವ ಶರೀರವನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರು ಹಾಗೂ ತಾಲೂಕು ತಹಸೀಲ್ದಾರ್ ವಿಠ್ಠಲ ಚೌಗಲಾ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಮುಖಂಡರು ಗೌರವ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ದೇಶ ಸೇವೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಯೋಧ ಯಶೋಧರ ವಡ್ಡರ, ತಮ್ಮ ಚಿಕ್ಕ ವಯಸ್ಸಿನಲ್ಲೇ ಹುತಾತ್ಮರಾದುದು ಅತ್ಯಂತ ದುಃಖದ ಸಂಗತಿಯಾಗಿದೆ. ದೇಶ ಸೇವೆಗಾಗಿ ಪ್ರಾಮಾಣಿಕವಾಗಿ ಕರ್ತವ್ಯದಲ್ಲಿರುವಾಗಲೇ ಅವರ ಸಾವು ಸಂಭವಿಸಿರುವುದು ಅತೀವ ನೋವು ತಂದಿದೆ. ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು. ಇದೇ ಸಂದರ್ಭದಲ್ಲಿ ಯೋಧ ಯಶೋಧರ ವಡ್ಡರ ಅವರ ತಂದೆ-ತಾಯಿ ಅವರಿಗೆ ಸಾಂತ್ವನ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ದೇಶದ ರಕ್ಷಣೆಗಾಗಿ ಕಂಕಣಬದ್ಧರಾದ ಸೈನಿಕ ಯಶೋಧರ ವಡ್ಡರ ಅವರ ಅಕಾಲಿಕ ನಿಧನ ತುಂಬಲಾರದ ಹಾನಿಯಾಗಿದೆ. ಅವರ ಬದುಕು ದೇಶಸೇವೆಗೆ ಅರ್ಪಣೆಯಾಗಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.ಮಾಜಿ ಸೈನಿಕರ ಸಂಘದ ತಿರಕನಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಿವರಾಜ ಕಡ್ಲಿ, ಸುರೇಶ ಸವಣೂರ, ಪ್ರಕಾಶ ಬಾಗಣ್ಣನವರ, ಮಂಜಪ್ಪ ಬಡಗೌಡರ, ಮಾಲತೇಶ ಸೊಪ್ಪಿನ, ಕೃಷ್ಣಾ ಈಳಿಗೇರ, ಟಾಕನಗೌಡ ಪಾಟೀಲ, ಮಹದೇವಪ್ಪ ಬಾಗಸರ, ಬಸವರಾಜ ಹಾದಿಮನಿ, ರಾಜಶೇಖರಗೌಡ ಕಟ್ಟೇಗೌಡರ, ಕಲ್ಯಾಣಕುಮಾರ ಶೆಟ್ಟರ, ಮಹೇಶ ಕಮಡೊಳ್ಳಿ, ಆರ್.ಬಿ. ಪಾಟೀಲ, ಮಹಬೂಬಲಿ ಬ್ಯಾಡಗಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಮಹೇಶ ಬಣಕಾರ ಇತರರು ಯಶೋಧರ ವಡ್ಡರ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.