ಸಾರಾಂಶ
ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ವೀರಯೋಧ ರುದ್ರಪ್ಪಾ ಗೋಕಾಕ ಅವರು ಪುಣೆ ಸಮೀಪ ರೈಲಿನಲ್ಲಿ ಪ್ರಯಾಣಿಸುವಾಗ ಹೃದಯಾಘಾತವಾಗಿತ್ತು.
ಯಮಕನಮರಡಿ: 30 ದಿನಗಳ ರಜಾ ನಿಮಿತ್ತ ಊರಿಗೆ ತೆರಳುವ ವೇಳೆ ರೈಲಿನಲ್ಲಿ ಪ್ರಯಾಣಿಸುವಾಗ ಮಂಗಳವಾರ (ಫೆ.25) ಹೃದಯಘಾತವಾಗಿ ಸಾವನ್ನಪ್ಪಿದ ಯೋಧನ ಅಂತ್ಯಕ್ರಿಯೆ ಬುಧವಾರ ಸಂಜೆ ನೆರವೇರಿತು.
ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ವೀರಯೋಧ ರುದ್ರಪ್ಪಾ ಗೋಕಾಕ ಅವರು ಪುಣೆ ಸಮೀಪ ರೈಲಿನಲ್ಲಿ ಪ್ರಯಾಣಿಸುವಾಗ ಹೃದಯಾಘಾತವಾಗಿತ್ತು. ತಕ್ಷಣ ರೈಲ್ವೆ ಇಲಾಖೆ ಅಧಿಕಾರಿಗಳಿಂದ ಸೈನಿಕ ಅಧಿಕಾರಿಗಳಿಗೆ ಸುದ್ದಿ ತಿಳಿದಿದ್ದು, ರುದ್ರಪ್ಪ ಗೋಕಾಕ ಪಾರ್ಥಿವ ಶರೀರ ವಶಕ್ಕೆ ಪಡೆದು, ಮೃತನ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೆ, ಗ್ರಾಮದಲ್ಲಿ ಮೌನ ಆವರಿಸಿತು. ಮೃತ ಯೋಧ ದೇಶದ ವಿವಿಧ ಭಾಗಗಳಲ್ಲಿ 22 ವರ್ಷಗಳ ಕಾಲ ಸೈನಿಕರಾಗಿ ಸೇವೆ ಸಲ್ಲಿಸಿದ್ದರು.ಸೇನಾ ವಾಹನದ ಮೂಲಕ ಫೆ.26ರಂದು ಸಂಜೆ ಬಸ್ಸಾಪುರ ಗ್ರಾಮಕ್ಕೆ ಪಾರ್ಥಿವ ಶರೀರ ಬಂದಿದ್ದು, ನಿವೃತ್ತ ಅಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಮತ್ತು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಹುಕ್ಕೇರಿ ತಾಲೂಕು ಉಪ ತಹಸೀಲ್ದಾರ್, ಶಾಲಾ ಮಕ್ಕಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಮೃತ ಯೋಧನಿಗೆ ತಂದೆ ರಾಮಚಂದ್ರ ಗೋಕಾಕ, ತಾಯಿ ಕಮಲವ್ವ ಗೋಕಾಕ, ಪತ್ನಿ ಸುಜತಾ ಗೋಕಾಕ, ಮಕ್ಕಳಾದ ಅಮೋಘ(12) ಅನುಪ(4) ಸೇರಿ ಅಪಾರ ಬಂಧು-ಬಳಗವಿದೆ.