ಸಾರಾಂಶ
ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜಿಲ್ಲೆಯ ಕಾಂಗ್ರೆಸ್ ನಾಯಕರೊಬ್ಬರು ಸಾಮಾಜಿಕ ಜಾಲತಾಣದ ಸಂದೇಶಕ್ಕೆ ಸಂಬಂಧಿಸಿದಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ತಾಲೂಕಿನ ಯಡುಂಡೆ ಗ್ರಾಮ ನಿವಾಸಿ, ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕರ್ತ ವಿನಯ್ ಸೋಮಯ್ಯ (39) ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಶನಿವಾರ ಸಂಜೆ ಅರೆಭಾಷಿಕ ಗೌಡ ಜನಾಂಗದ ಸಂಪ್ರದಾಯದಂತೆ ನೆರವೇರಿತು.ಗ್ರಾಮಸ್ಥರು, ಕುಟುಂಬಸ್ಥರು, ಅಪಾರ ಬಂಧುಮಿತ್ರರು ಅಂತಿಮ ನಮನ ಸಲ್ಲಿಸಿದರು. ನಂತರ ಅವಳಿ ಸಹೋದರ ವಿವೇಕ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಮೃತನ ತಾಯಿ ದೇವಕಿ, ಪತ್ನಿ ಶೋಭಿತಾ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮೈಸೂರು ಸಂಸದ ಯದುವೀರ್ ಒಡೆಯರ್, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಬಿಜೆಪಿ ನಾಯಕರಾದ ಭಾರತೀಶ್, ಬಿ.ಸಿ.ನವೀನ್, ಗೌತಮ್ ಗೌಡ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.ಮುಗಿಲು ಮುಟ್ಟಿದ ಆಕ್ರಂದನ:
ಗ್ರಾಮಸ್ಥರು, ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಮಾಜಿ ಸೈನಿಕ ದಿ. ಸೋಮಯ್ಯನವರ ಸಮಾಧಿ ಪಕ್ಕದಲ್ಲೇ ಅವರ ಕುಟುಂಬಕ್ಕೆ ಸೇರಿದ ಕಾಫಿ ತೋಟದಲ್ಲಿ ವಿನಯ್ ಅವರ ಚಿತೆಗೆ ಸಹೋದರ ವಿವೇಕ್ ಅಗ್ನಿಸ್ಪರ್ಶ ಮಾಡಿದರು.