ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ಸಂದರ್ಭಕ್ಕೆ ಹೊಲಿಕೆ ಮಾಡಿದರೆ ಲೀಟರ್ ಹಾಲಿನ ದರ 40 ರೂ.ಗಳಿಂದ 50 ರೂ.ಗೆ ಇರಬೇಕಿತ್ತು. ಈ ಬಗ್ಗೆ ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡೋಣ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ ಆರ್. ಚೆಲುವರಾಜು ತಿಳಿಸಿದರು.ನಗರದ ಪಡುವಾರಹಳ್ಳಿಯ ವಿನಾಯಕ ಕನ್ವೆಷನ್ ಹಾಲ್ ನಲ್ಲಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ 2024-25ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಇತರೆ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಹಾಲಿನ ದರ ಹೆಚ್ವಳ ಮಾಡಬಹುದಿತ್ತು. ಆಗಿನ ಸರ್ಕಾರ ಆ ಕೆಲಸಕ್ಕೆ ಮುಂದಾಗಲಿಲ್ಲ. ಸಿದ್ದರಾಮಯ್ಯ ಅವರು ಆಡಳಿತಕ್ಕೆ ಬಂದ ಬಳಿಕ 36 ರೂಪಾಯಿಗೆ ಹೆಚ್ಚಳ ಮಾಡಿ ರೈತರಿಗೆ ನೆರವಾಗಿದ್ದಾರೆ. ಅದು ಮತ್ತಷ್ಟು ಹೆಚ್ಚಳ ಆಗಬೇಕೆಂಬುದು ಎಲ್ಲರ ಒಕ್ಕೊರಲ ಬೇಡಿಕೆಯಾಗಿದೆ. ಅದನ್ನು ಸರ್ಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.ಮರಣ ನಿಧಿಯನ್ನು 15 ಸಾವಿರ ಮಾಡಿದ್ದು, 60 ವರ್ಷ ಮೇಲ್ಪಟ್ಟವರಿಗೆ 20 ಸಾವಿರ ನಿಧಿ ನೀಡಲು ತೀರ್ಮಾನಿಸಲಾಗಿದೆ. ಪ್ರತಿಯೊಬ್ಬರಿಗೂ 1 ಲಕ್ಷ ರೂ. ವಿಮೆ ಮಾಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ರಾಸುಗಳಿಗೂ ವಿಮೆ ಕಡ್ಡಾಯ ಮಾಡಿದ್ದು, ರಾಸುಗಳ ವಿಮೆ ಹೆಚ್ಚಳ ಸಂಬಂಧ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಸದ್ಯ 2 ವರ್ಷಕ್ಕೊಮ್ಮೆ ಇರುವ ವಿಮೆಯನ್ನು ಪ್ರತಿ ವರ್ಷಕ್ಕೊಮ್ಮೆ ಕಡಿತಗೊಳಿಸಿ ಗೋವಿನ ಬೆಲೆಗೆ ಅನುಸಾರ ನೀಡುವ ಬಗ್ಗೆ ಕೈಗೊಳ್ಳಲಾಗುವುದು. ಮ್ಯಾಟ್ ಗಳಿಗೆ ಹೆಚ್ಚಿನ ಬೇಡಿಕೆಗಳಿರುವುದು ಗಮನಕ್ಕೆ ತಂದಿದ್ದೀರಿ, ಸದ್ಯ 2 ಸಾವಿರ ಮ್ಯಾಟ್ ಹಂಚಿದ್ದು, ಉಳಿದ 7 ಸಾವಿರ ಮ್ಯಾಟ್ ಗಳನ್ನು ಶೀಘ್ರ ಹಂಚುವ ಪ್ರಕ್ರಿಯೆ ನಡೆಯಲಿದೆ. ಚಾಪ್ ಕಟ್ಟರ್ ಗಳು ಬಂದಿದ್ದು, ಅವುಗಳನ್ನು ಪಡೆದುಕೊಳ್ಳಿ ಎಂದರು.
ರಾಜ್ಯದಲ್ಲೇ ಶೇ.10 ರಷ್ಟು ಹಾಲು ಜಿಲ್ಲೆಯಿಂದಲೇ ಉತ್ಪಾದನೆ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗ 4.5 ಲಕ್ಷ ಲೀಟರ್ ಮಾರಾಟ ಮಾಡಿ ಉಳಿದ ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ 25 ಕೋಟಿ ಖರ್ಚು ಆಗುತ್ತಿದೆ. ಇದಕ್ಕಾಗಿ ನಮ್ಮಲ್ಲೇ ಪೌಡರ್ ಪ್ಲಾಂಟ್, ಚಾಕ್ಲೆಟ್, ಪನ್ನೀರ್ ಉತ್ಪಾದನೆ ಘಟಕ ಮಾಡುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. ಪ್ರತಿ ಗ್ರಾಮದಲ್ಲಿಯೂ ಹಾಲು ಒಕ್ಕೂಟ ಸ್ವಂತ ಕಟ್ಟಡ ಹೊಂದಬೇಕೆಂಬ ಉದ್ದೇಶದಿಂದ ಸಂಘದಿಂದ ಅನುದಾನ ಸಹ ನೀಡಲಾಗುತ್ತಿದೆ ಎಂದು ಹೇಳಿದರು.ಚೆನ್ನೈ 50 ಸಾವಿರ ಲೀಟರ್ ಮಾರಾಟ ಮಾಡಲಾಗುತ್ತಿದ್ದು, 1 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದೇವೆ. 17 ಸಾವಿರ ಲೀಟರ್ ಕೇರಳದಲ್ಲಿಯೂ ಮಾರಾಟ ಮಾಡಲಾಗುತ್ತಿದೆ. ಮೈಸೂರು ಹೆಚ್ಚಿನ ದರ ಕೊಟ್ಟು ರಾಜ್ಯದಲೇ ನಂಬರ್ ಒನ್ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ವ್ಯವಸ್ಥೆ ಮಾಡುತ್ತಿದೆ. ಹಿಂದೆ ಎಲ್ಲರಿಗೂ ಇದ್ದ ವ್ಯವಸ್ಥೆಯನ್ನು ಜಿಲ್ಲಾ ಮಕ್ಕಳಿಗೆ ಸೀಮಿತ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹೈನೋದ್ಯಮಿಗಳಿಗೂ ಒಳ್ಳೆಯ ದಿನಗಳು ಬರಲಿವೆ. ಹೈನುಗಾರಿಕೆ ಉಪಕಸುಬಾಗದೇ ಹೆಮ್ಮರವಾಗಿ ಉದ್ಯಮವಾಗಿ ಬೆಳೆಯಬೇಕಿದೆ. ಸದ್ಯ 10 ದಿನಕ್ಕೊಮ್ಮೆ ಹಾಲಿನ ಹಣ ಹಾಕುತ್ತಿದ್ದು, ನಿತ್ಯವೂ ಅಕೌಂಟ್ ಗೆ ಹಾಕುವ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.ಪ್ರಶಸ್ತಿಗಳ ವಿವರ
ಉತ್ತಮ ಮಹಿಳಾ ಸಂಘದಲ್ಲಿ ಕೆಂಪೇಗೌಡನಹುಂಡಿಯ ಆರ್. ಮಂಗಳಾ, ಕೃಷ್ಣರಾಜಪುರ ಮಂಜುಳಾ, ಮುಡುಕನಪುರ ರಾಜಮಣಿ, ಅಗ್ರಹಾರದ ಕೆಂಪಾಮಣಿ, ಶೀಗವಾಳು ಧನಲಕ್ಷ್ಮಿ, ಕೊತ್ತೇಗಾಲ ಜ್ಯೋತಿ, ಮಲಗನಕೆರೆ ಸಂಘ ಪಡೆದುಕೊಂಡಿವೆ.ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಬಂಡಿಪಾಳ್ಯ ಬಸವರಾಜು, ದೇವನೂರು ಸುಹಾಸ್, ತುರಗನೂರು ಡಿ.ಪಿ. ಅಶೋಕ್ ಕುಲಕರ್ಣಿ, ಬಸವನಹಳ್ಳಿ ಸುರೇಶ್ ಬಾಬು, ಗುಳವಿನ ಅತ್ತೀಗುಪ್ಪೆ ಹನುಮಂತೇಗೌಡ, ಇಂದಿರಾನಗರ ಶಿಜೋ ಜಾರ್ಜ್, ನವಿಲೂರು ಪಿಡಿ ಭೂಷಿತ್ ಪ್ರಶಸ್ತಿ ಸ್ವೀಕರಿಸಿದರು.
ಉತ್ತಮ ಸೊಸೈಟಿಯಾಗಿ ವರಕೂಡಿನ ಪಿ. ಶಂಕರ್, ಸರಗೂರಿನ ಎಂ. ರಾಜೇಶಪ್ಪ, ಜೆ. ರಂಗಸ್ವಾಮಿ, ಮರಳಯ್ಯನ ಕೊಪ್ಪಲು ಬಸವರಾಜು, ನಾರಾಯಣಪುರ ರುದ್ರಸ್ವಾಮಿ, ಜೆ.ಸಿ. ಪಾಳ್ಯದ ದೇವರಾಜ ಅರಸ್, ಆನಂದಗೆರೆ ಅಭಿಲಾಶ್ ಪಡೆದುಕೊಂಡರು.ಮೈಮುಲ್ ನಿರ್ದೆಶಕರಾದ ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಸಿ.ಓಂ. ಪ್ರಕಾಶ್, ಪಿ.ಎಂ. ಪ್ರಸನ್ನ, ಕೆ. ಈರೇಗೌಡ, ಕೆ.ಎಸ್. ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ. ಗುರುಸ್ವಾಮಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್ ಮೊದಲಾದವರು ಇದ್ದರು.