ಔರಾದ್‌ನಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ: ಸಾಹಿತಿ ಕಟ್ಟೆ

| Published : Mar 30 2024, 12:53 AM IST

ಔರಾದ್‌ನಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ: ಸಾಹಿತಿ ಕಟ್ಟೆ
Share this Article
  • FB
  • TW
  • Linkdin
  • Email

ಸಾರಾಂಶ

ಔರಾದ್ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರಿಗೆ ಅಮರವಾಡಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಔರಾದ್

ಔರಾದ್ ಪಟ್ಟಣ ವಿಶಿಷ್ಟವಾದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿರಿಮೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಔರಾದ್ ಕುರಿತು ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಶಿವಕುಮಾರ ಕಟ್ಟೆ ಅಭಿಪ್ರಾಯಪಟ್ಟರು.

ಪಟ್ಟಣದ ಬಸವ ಮಂಟಪದಲ್ಲಿ ದಿ. ಭೀಮಗೊಂಡ್ ಅಮರವಾಡಿ ಅವರ ಪ್ರಥಮ ವರ್ಷದ ಸ್ಮರಣಾರ್ಥ ಸಂಭ್ರಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜಿಸಿದ್ದ ಅಮರವಾಡಿ ಸಂಸ್ಕೃತಿ ಚಿಂತನೆ ಅಮರವಾಡಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಂದಿನ ಅಮರವಾಡಿಯೇ ಕ್ರಮೇಣ ಬದಲಾಗುತ್ತ ಇಂದು ಔರಾದ್ ಆಗಿದೆ. ಔರಾದ್ ಪಟ್ಟಣ ಅಂದು ಪ್ರಖ್ಯಾತ ನಗರವಾಗಿರುವ ಕುರಿತು, ಅಮರೇಶ್ವರ ಸಂತನೆಂಬ ವಿಚಾರ ಸೇರಿ ಅನೇಕ ರೋಚಕ ವಿಷಯಗಳು ನಮಗೆ ದೊರೆತ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ವಿಖ್ಯಾತನಗರವರವಾಡಿ ಎಂಬ ಪದವು ಕೂಡ ಇದನ್ನು ಪುಷ್ಟಿಕರಿಸುತ್ತದೆ.

ಮಾಂಜರಾ ನದಿ ಈಚೆಗೆ ಮಾತ್ರ ಔರಾದ್‌ನ ಕುರುಹುಗಳು ಪತ್ತೆಯಾಗಿದ್ದರೂ ಮಹಾರಾಷ್ಟ್ರದ ದೇಗಲೂರ್, ನಾಂದೇಡ್, ಔರಾಂಗಬಾದವರೆಗೂ ಇದರ ಹಲವು ಸಾಕ್ಷ್ಯಗಳು ದೊರೆಯುತ್ತವೆ ಎಂಬುದು ಅಭಿಮಾನದ ವಿಷಯವಾಗಿದೆ ಎಂದರು.

ಲಿಂಗಾಯತ ಮಹಾಸಭಾ ಅಧ್ಯಕ್ಷ ಕಲ್ಲಪ್ಪ ದೇಶಮುಖ ಮಾತನಾಡಿ, ತನ್ನ ತಂದೆ ಸ್ಮರಣಾರ್ಥ ಊರು ಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯ ಅವಿಸ್ಮರಣೀಯವಾಗಿದೆ. ಭೀಮಣ್ಣ ಒಬ್ಬ ನಾಟಿವೈದ್ಯರಾಗಿ ಹಲವು ಜನರ ಸೇವೆ ಮಾಡಿದ್ದು, ಅಂದಿನ ಕಾಲದಲ್ಲಿ ಮೂಳೆ ಮುರಿತಕ್ಕೊಳಗಾದ ಅನೇಕರಿಗೆ ಇವರೇ ಪ್ರಖ್ಯಾತ ಮೂಳೆ ತಜ್ಞರಾಗಿ ಚಿಕಿತ್ಸೆ ನೀಡಿದ್ದಾರೆ ಎಂದರು.

ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಪಂಡರಿ ಆಡೆ ಮಾತನಾಡಿ, ಪ್ರಸ್ತುತ ತಂದೆ ತಾಯಿಯರ ಗೌರವಿಸದ ಇಂತಹ ದಿನಮಾನಗಳಲ್ಲಿ ತಂದೆ ಸ್ಮರಣರ್ಥಾ ಜ್ಞಾನ ದಾಸೋಹದ ಜೊತೆ ಅನ್ನ ದಾಸೋಹದ ಕಾರ್ಯ ಮಾಡುತ್ತಿರುವ ಅಮರವಾಡಿ ಕುಟುಟಂಬದ ಕಾರ್ಯ ಮಾದರಿಯಾಗಿದೆ ಎಂದರು.

ಐವರು ಸಾಧಕರಿಗೆ ಅಮರವಾಡಿ ರತ್ನ ಪ್ರಶಸ್ತಿ:

ಇದೇ ಸಂದರ್ಭದಲ್ಲಿ ಔರಾದ್ ತಾಲೂಕಿನ ಕೀರ್ತಿ ಹೆಚ್ಚಿಸಿದ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುನಾಥಪ್ಪ ಉಂಗುರಶೆಟ್ಟಿ, ಹಿರಿಯ ನಾಟಿವೈದ್ಯ ನಾಗಪ್ಪ ದುಡುಕನಾಳೆ, ಮಕ್ಕಳ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸುಂದಾಳ ಗ್ರಾಪಂ ಮೇಲ್ವಿಚಾರಕ ಸಂತೋಷ ಭಾಲ್ಕೆ, ವಚನ ಸಾಹಿತ್ಯ ಪ್ರಸಾರದ ಜೊತೆ ವಚನಗಳೇ ಬದುಕಾಗಿ ಬದಲಿಸಿಕೊಂಡ ವಿದ್ಯಾವತಿ ಎಡವೆ ಹಾಗೂ ಜಾನಪದ ಗಾಯನಗಳು ಜೀವಂತವಾಗಿಟ್ಟು ಯುವಕ ಯುವತಿಯರಿಗೆ ಕಲಿಸುತ್ತಿರುವ ಶ್ರೀದೇವಿ ನರಸಗೊಂಡ್ ಅವರಿಗೆ ಅಮರವಾಡಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತೀಯ ಬಸವ ಬಳಗದ ಡಾ.ಧನರಾಜ ರಾಗಾ, ಬಿ.ಎಂ ಅಮರವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಮರವಾಡಿ ಎಂಬುದು, ನಮ್ಮ ಊರು ನಮಗೆ ಬದುಕು ನೀಡಿದ ಮಣ್ಣಿನ ಗೌರವದ ಪ್ರತೀಕವಾದ ಹೆಸರಾಗಿದೆ. ಸಂತ ಮಹಾತ್ಮರ ದಿವ್ಯ ಸಂದೇಶಗಳಂತೆ ಅಮರವಾಡಿ ಹೆಸರು ಕೂಡ ಸಮಸ್ತ ಔರಾದ್ ತಾಲೂಕಿನ ಜನರ ಆಸ್ತಿಯಾಗಿದೆ. ಇದು ಅಮರೇಶ್ವರ ದೇವರ ಸಾಕ್ಷಿ ಪ್ರಜ್ಞೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷೆ ಅಂಜನಾಬಾಯಿ ಅಮರವಾಡಿ, ಅಮೃತರಾವ ಬಿರಾದಾರ್, ಜಗನ್ನಾಥ ದೇಶಮುಖ, ಜಗನ್ನಾಥ ಮೂಲಗೆ, ಧನರಾಜ ನಿಟ್ಟೂರೆ, ಅಡವೆಪ್ಪ ಪಟ್ನೆ, ಪಿಎಸ್ಐ ರೇಣುಕಾ ಬಾಲಾಜಿ ಭಾಲೇಕರ್, ಮಂಗಲಾ ಗಣಪತಿ ಶಿವಗೊಂಡ್, ಲತಾ ಏಕನಾಥ ಕೋಕನೆ, ಶೋಭಾ ನರಸಪ್ಪ ಬ್ಯಾಲೊಳ್ಳೆ, ಪ್ರಿಯಂಕಾ ಅಮರವಾಡಿ, ಮಹಾನಂದಾ ಎಂಡೆ, ಕವಿತಾ ಸಂಜುಕುಮಾರ್, ಮಂಜುಳಾ ರವಿ ಸೇರಿ ಇನ್ನಿತರರಿದ್ದರು.