ಸಾರಾಂಶ
ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸೊರಬವಿದ್ಯಾರ್ಥಿಗಳು ಕಲಿಕೆ ಹಂತದಲ್ಲಿಯೇ ಗುರುಗಳನ್ನು ಗೌರವಿಸುವ ಮೂಲಕ ಅವರ ಮಾರ್ಗದರ್ಶನಲ್ಲಿ ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ನುಡಿದರು.
ಗುರುವಾರ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ರೈತಾಪಿ ವರ್ಗದ ಮಕ್ಕಳು ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಪರಿಶ್ರಮ ಪಡುವ ಜತೆಗೆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಾಧನೆಗಳಿಗೆ ಸಮಾಜದಲ್ಲಿ ಗೌರವಗಳಿದ್ದು, ಪೋಷಕರು ಇಟ್ಟ ನಂಬಿಕೆ, ಕನಸುಗಳನ್ನು ಮಕ್ಕಳು ಈಡೇರಿಸುವಲ್ಲಿ ಸಫಲರಾಗಬೇಕು ಎಂದು ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ್ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ವ್ಯವಸ್ಥೆಗಳನ್ನು ಸಚಿವರಾದ ಮಧು ಬಂಗಾರಪ್ಪ ಅವರು ನೀಡಿದ್ದಾರೆ. ಮಕ್ಕಳಿಗೆ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದು, ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತೆ ಬೆಳವಣಿಗೆ ಹೊಂದುತ್ತಿರುವುದು ಸಂತೋಷದಾಯಕವಾದದ್ದು ಎಂದರು.ಪ್ರಾಂಶುಪಾಲ ಎಂ.ಸುರೇಶಪ್ಪ ಮಾತನಾಡಿ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ೪೫ ಲಕ್ಷ ರು. ವಿಶೇಷ ಅನುದಾನ ಬಿಡುಗಡೆಗೊಳಿಸಿ ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಂಡು ಜ್ಞಾನ ಸಂಪಾದನೆ ಮಾಡಬೇಕು. ಪೋಷಕರು, ಶಿಕ್ಷಕರು ಹಾಗೂ ಉಪನ್ಯಾಸಕರ ಸಮನ್ವಯತೆಯಿಂದ ಕಾಲೇಜಿನ ಫಲಿತಾಂಶ ಪ್ರತಿವರ್ಷ ಹೆಚ್ಚಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಗಣಪತಿ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾದನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವೀರೇಶ್ ಶಿಗ್ಗಾ, ಪುಷ್ಪಾ, ವಿಜೇಂದ್ರ ಯಡಗೊಪ್ಪ, ಪೋಷಕ ಟಿ.ಜಿ. ಪರಶುರಾಮಪ್ಪ, ಉಪನ್ಯಾಸಕರಾದ ವೈ.ರವಿ, ಬಸವರಾಜು, ಡಾ. ಉಮೇಶ್ ಭದ್ರಾಪುರ, ಶಶಿಕಲಾ, ಭರತ್‌ಕುಮಾರ್, ಕೆ. ಮಂಜುನಾಥ್ ನೀಲಕಂಠಪ್ಪ, ಶರಾವತಿ, ನಯನಾ, ವಸಂತ್, ಪ್ರಜ್ವಲ್, ಸಿಬ್ಬಂದಿ ರೇವಣಪ್ಪ ಚಿಕ್ಕಶಕುನ, ಧರ್ಮನಾಯ್ಕ್ ಹಾಜರಿದ್ದರು.
ಉಪನ್ಯಾಸಕರಾದ ಚಿದಾನಂದ ಗೌಡ ಸ್ವಾಗತಿಸಿ, ವಿಜಯ್ ದಟ್ಟೇರ್ ನಿರೂಪಿಸಿ, ಮಲ್ಲೇಶಪ್ಪ ವಂದಿಸಿದರು.