ಭವಿಷ್ಯದ ಭಾರತದ ಯುವಕರ ಬಜೆಟ್-ಸಂಸದ ಬೊಮ್ಮಾಯಿ ಬಣ್ಣನೆ

| Published : Jul 24 2024, 12:21 AM IST

ಭವಿಷ್ಯದ ಭಾರತದ ಯುವಕರ ಬಜೆಟ್-ಸಂಸದ ಬೊಮ್ಮಾಯಿ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರದ ಬಜೆಟ್ ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾವೇರಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರದ ಬಜೆಟ್ ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಜೆಟ್ ನಂತರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ೧೦ ವರ್ಷದ ಆರ್ಥಿಕತೆಯ ಸುಧಾರಣೆಯಿಂದ ವಿಶ್ವದಲ್ಲಿಯೇ ಭಾರತ ಬೆಳೆಯುತ್ತಿರುವ ರಾಷ್ಟ್ರ ಎನ್ನುವುದನ್ನು ಈ ಬಜೆಟ್ ತೋರಿಸುತ್ತದೆ. ಹಣದುಬ್ಬರ ಸೀಮಿತಗೊಳಿಸಿರುವುದು, ಹೆಚ್ಚು ಜನರಿಗೆ ಕೆಲಸ ಕೊಡಿಸಿರುವುದು, ವಿಕಸಿತ ಭಾರತ ಮಾಡುವ ಹತ್ತು ವರ್ಷದ ಸಂಕಲ್ಪವನ್ನು ಬರುವ ದಿನಗಳಲ್ಲಿ ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಪರವಾದ ಬಜೆಟ್ ಇದಾಗಿದೆ ಎಂದು ಹೇಳಿದರು.ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ೧.೫ ಲಕ್ಷ ಕೋಟಿ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ೧.೫ ಲಕ್ಷ ಕೋಟಿ, ಮುದ್ರಾ ಯೋಜನೆಯಲ್ಲಿ ಸಾಲ ನೀಡುವ ಪ್ರಮಾಣವನ್ನು ೧೦ ಲಕ್ಷದಿಂದ ೨೦ ಲಕ್ಷಕ್ಕೆ ಹೆಚ್ಚಳ ಮಾಡಿರುವುದು, ಗ್ರಾಮೀಣಾಭಿವೃದ್ಧಿ ಅಭಿವೃದ್ಧಿಗೆ ೧ ಲಕ್ಷ ಕೋಟಿ, ಬಡವರಿಗೆ ೩ ಕೋಟಿ ಮನೆ ಕೊಡುವುದು, ಕೃಷಿ ವಲಯಕ್ಕೆ ಬಹಳ ಒತ್ತು ಕೊಟ್ಟಿದ್ದು, ಕೃಷಿ ಉತ್ಪಾದನೆ ಹೆಚ್ಚಳ ಮತ್ತು ಸಂಸ್ಕರಣೆಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.ಉತ್ಪಾದನಾ ವಲಯದಲ್ಲಿ ವಿಶೇಷವಾಗಿ ಸಣ್ಣ ಕೈಗಾರಿಕೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಸೇವಾ ವಲಯವೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮೂರು ವಲಯದಲ್ಲಿ ಹೆಚ್ಚಿಗೆ ಹಣ ಹೂಡಿಕೆ ಮಾಡಲು ದೇಶದ ಆರ್ಥಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ವಲಯಗಳಾದ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಹೆಚ್ಚಿನ ಹಣ ನೀಡಿರುವುದು ಸ್ವಾಗತಾರ್ಹ ವಿಷಯ. ಮೂಲ ಸೌಕರ್ಯ ಅಭಿವೃದ್ಧಿಗೆ ಕಳೆದ ಬಾರಿಗಿಂತ ಹೆಚ್ಚು ಹಣ ನೀಡಿದ್ದಾರೆ. ಮಹಿಳೆಯ ಸಬಲೀಕರಣಕ್ಕೆ ವಿಶೇಷ ಕಾನೂನು ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ.ಸಾಮಾನ್ಯ ಜನರ ತೆರಿಗೆ ಭಾರ ಕಡಿಮೆ ಮಾಡಿದ್ದು, ಮೂರು ಲಕ್ಷದವರೆಗೂ ಯಾವುದೇ ತೆರಿಗೆಯಿಲ್ಲ. ಇದರಿಂದ ಮಧ್ಯಮ ವರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಶಿಸ್ತು ಕಾಪಾಡಿರುವುದು ಮುಖ್ಯವಾಗಿದೆ. ವಿತ್ತಿಯ ಕೊರತೆ ಶೇ. ೫.೩ರಿಂದ ೪.೭ಕ್ಕೆ ಇಳಿಸಿದ್ದು, ಮುಂದಿನ ವರ್ಷ ಶೇ. ೪.೫ಕ್ಕೆ ಇಳಿಸುವಂಥದ್ದು ಹಾಗೂ ವಿದೇಶಿ ನೇರ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವಂತೆ ಅನುಕೂಲ ಮಾಡಿದ್ದು, ಸರ್ಕಾರದ ಸಾಲ ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇದು ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಬಣ್ಣಿಸಿದರು.